ADVERTISEMENT

‘ಸದೃಢ ಭವಿಷ್ಯಕ್ಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ’

ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:40 IST
Last Updated 15 ನವೆಂಬರ್ 2025, 6:40 IST
ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಉದ್ಘಾಟಿಸಿದರು
ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಉದ್ಘಾಟಿಸಿದರು   

ಶಿವಮೊಗ್ಗ: ‘ಸದೃಢ ಭವಿಷ್ಯಕ್ಕಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ತಿಳಿಸಿದರು.

ಡಿವಿಎಸ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪುಸ್ತಕಗಳಲ್ಲಿ ಆಯಾ ಕಾಲಘಟ್ಟದ ಘಟನೆಗಳು, ಜನರ ಜೀವನ ಶೈಲಿ, ಪರಿಸರ ಸೇರಿದಂತೆ ವೈವಿಧ್ಯಮಯ ಸಂಗತಿಗಳನ್ನು ಕಾಣಬಹುದಾಗಿದೆ. ಪುಸ್ತಕದ ಅಧ್ಯಯನದ ಮೂಲಕ ಶತಮಾನಗಳಲ್ಲಿ ನಡೆದ ಐತಿಹಾಸಿಕ ಸಂಗತಿಗಳನ್ನು ಹಾಗೂ ಜೀವನ ಶೈಲಿಯನ್ನು ಅರಿತುಕೊಳ್ಳಬಹುದಾಗಿದೆ. ಓದುಗರಿಗೆ ಪುಸ್ತಕ ತಲುಪಿಸುವಲ್ಲಿ ಗ್ರಂಥಾಲಯಗಳು ಮುಖ್ಯ ಪಾತ್ರ ವಹಿಸುತ್ತವೆ’ ಎಂದರು. 

ADVERTISEMENT

‘ಖ್ಯಾತ ಗಣಿತಜ್ಞ ಎಸ್.ಆರ್.ರಂಗನಾಥನ್ ಅವರನ್ನು ಗ್ರಂಥಾಲಯದ ಪಿತಾಮಹ ಎನ್ನಲಾಗುತ್ತದೆ. ಅವರು ಗ್ರಂಥಾಲಯ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವ್ಯವಸ್ಥಿತವಾಗಿ ಪುಸ್ತಕ ಜೋಡಿಸುವ ಮತ್ತು ಓದುಗರಿಗೆ ಪುಸ್ತಕಗಳು ದೊರಕುವಂತೆ ಮಾಡುವ ಕೊಲೋನ್ ವರ್ಗೀಕರಣ ಪದ್ಧತಿ ಪರಿಚಯಿಸಿದ್ದಾರೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪಿ.ಧರಣಿಕುಮಾರ್ ತಿಳಿಸಿದರು. 

ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಎಸ್.ಎಲ್.ಕಾಡದೇವರಮಠ, ಬಿ.ಗೋಪಿನಾಥ್, ಎಂ.ಸತೀಶ್‌ಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಚಾರ್ಯ ಎಂ.ವೆಂಕಟೇಶ್, ಎನ್.ಕುಮಾರಸ್ವಾಮಿ, ಕೆ.ನಿರಂಜನ ಇದ್ದರು.

‘ಓದುಗರಿಗೆ ತಲುಪದ ಪುಸ್ತಕ’

‘ಪ್ರತಿ ವರ್ಷ 6000 ಕನ್ನಡ ಪುಸ್ತಕ ಪ್ರಕಟವಾಗುತ್ತವೆ. ಇದರಲ್ಲಿ ಹೆಚ್ಚಿನ ಪುಸ್ತಕಗಳು ಓದುಗರಿಗೆ ತಲುಪುವುದಿಲ್ಲ. ವಿದ್ಯಾರ್ಥಿಗಳು ಪುಸ್ತಕ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ತಿಳಿಸಿದರು. ‘ಕರ್ನಾಟಕ ಸಂಘದಿಂದ ಪ್ರತಿ ವರ್ಷ 12 ವಿವಿಧ ಪ್ರಕಾರಗಳಲ್ಲಿ ಬಹುಮಾನ ನೀಡಲಾಗುತ್ತಿದೆ. ಲೇಖಕರನ್ನು ಪ್ರೋತ್ಸಾಹಿಸುವ ಕೆಲಸವನ್ನು ಕರ್ನಾಟಕ ಸಂಘ ಮಾಡುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.