
ಸೊರಬ: ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬ ದೇವಿ ಜಾತ್ರಾ ಮಹೋತ್ಸವವನ್ನು ಫೆ.22 ರಿಂದ 31ರವರೆಗೆ ಸರ್ಕಾರದ ಆದೇಶದಂತೆ ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ ಆಚರಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ವೀರೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಜಾತ್ರೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶೌಚಾಲಯ, ಸ್ನಾನಗೃಹ, ಕಾಂಪೌಂಡ್ ಸೇರಿದಂತೆ ಮೂಲ ಸೌಲಭ್ಯಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಬರುವ ಭಕ್ತರಿಗೆ ಸೌಲಭ್ಯ ಹಾಗೂ ಮೊಬೈಲ್ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಭಕ್ತರಿಗೆ ಉಳಿದುಕೊಳ್ಳುಲು ಯಾತ್ರಿ ನಿವಾಸದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಕ್ರಮ ವಹಿಸಬೇಕಿದೆ.
ರಾಜ್ಯದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಚಂದ್ರಗುತ್ತಿ ರೇಣುಕಾಂಬ ದೇವಿ ಕ್ಷೇತ್ರವು ಅಭಿವೃದ್ಧಿಯಿಂದ ಕುಂಠಿತವಾಗಿದೆ. ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಆದರೆ ಭಕ್ತರಿಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಸ್ವಚ್ಚತೆ ಸೇರಿದಂತೆ ಭಕ್ತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕು. ಪ್ರತಿ ಭಾರಿ ಸಭೆಯಲ್ಲಿ ಚರ್ಚೆಯಾಗುವುದೇ ವಿನಃ ಕ್ರಮ ಕೈಗೊಳ್ಳಲು ಇಲಾಖೆ ಎಡವಿದೆ ಎಂದು ಸಾರ್ವಜನಿಕರು ಸಭೆಯಲ್ಲಿ ದೂರಿದರು.
ರಥಬೀದಿ ಅಂಗಡಿಗಳಲ್ಲಿ ರಾಸಾಯನಿಕ ಕುಂಕುಮ ಮಾರಾಟ ಮಾಡದಂತೆ ಸೂಚನೆ ನೀಡಬೇಕು. ಕಳೆದ ಜಾತ್ರಾ ಮಹೋತ್ಸವದಲ್ಲಿ ಕುಡಿಯುವ ನೀರಿನ ಸರಬರಾಜು ಹಾಗೂ ಶಾಮಿಯಾನ ವ್ಯವಸ್ಥೆ ಕಲ್ಪಿಸಿದವರಿಗೆ ಬಾಕಿ ಇರುವ ಹಣವನ್ನು ನೀಡುವಂತೆ ಒತ್ತಾಯಿಸಲಾಯಿತು.
ದೇವಸ್ಥಾನದಲ್ಲಿ ಸೇವೆ ಸಲ್ಲಿಸುವಂತಹ ವಾದ್ಯ ನುಡಿಸುವವರು, ತೇರು ಕಟ್ಟುವವರು, ಪಲ್ಲಕ್ಕಿ ಹೊರುವ ಕಾರ್ಮಿಕರಿಗೆ ಹಿಂದಿನಿಂದಲೂ ಗೌರವ ಧನ ನೀಡಲಾಗುತ್ತಿದ್ದು, ಅದನ್ನು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ತಹಶೀಲ್ದಾರ್ ಮಂಜುಳಾ ಹೆಗಡಾಳ್, ಸಿಪಿಐ ಮಹಂತೇಶ್, ಕಾರ್ಯನಿರ್ಹಣಾಧಿಕಾರಿ ಪ್ರಮೀಳಾ ಕುಮಾರಿ, ತಾ.ಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ದಸರಾ ಕಮಿಟಿ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಗ್ರಾ.ಪಂ ಉಪಾಧ್ಯಕ್ಷ ರೇಣುಕಾ, ಗ್ರಾ.ಪಂ ಸದಸ್ಯ ರತ್ನಾಕರ್, ಎನ್.ಜಿ ನಾಗರಾಜ್, ಯಶೋಧರ್, ಟಿಎಚ್ಓ ನೂತನ್, ಪಿಎಸ್ಐ ನವೀನ್, ಪಿಡಿಓ ನಾರಾಯಣಮೂರ್ತಿ, ಶೃತಿ, ಉಮೇಶ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.