ADVERTISEMENT

ಗಣರಾಜ್ಯೋತ್ಸವ: ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 11:08 IST
Last Updated 17 ಜನವರಿ 2022, 11:08 IST
ಶಿವಮೊಗ್ಗದಲ್ಲಿ ಸೋಮವಾರ ಶ್ರೀನಾರಾಯಣ ಗುರು ವಿಚಾರ ವೇದಿಕೆ ಸದಸ್ಯರು ದೆಹಲಿಯ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿ ಒಳಗೊಂಡ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಸೋಮವಾರ ಶ್ರೀನಾರಾಯಣ ಗುರು ವಿಚಾರ ವೇದಿಕೆ ಸದಸ್ಯರು ದೆಹಲಿಯ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿ ಒಳಗೊಂಡ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ದೆಹಲಿಯ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿ ಒಳಗೊಂಡ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಬೇಕು. ಗುರುಗಳಿಗೆ ಗೌರವ ಕೊಡಬೇಕು ಎಂದು ಆಗ್ರಹಿಸಿ ಗುರು ವಿಚಾರ ವೇದಿಕೆ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಗುರುಗಳ ಮೂರ್ತಿ ಇರುವ ಸ್ತಬ್ಧ ಚಿತ್ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಸಾಗಲು ಕೇಂದ್ರ ಗಣರಾಜ್ಯೋತ್ಸವದ ಆಯ್ಕೆ ಸಮಿತಿ ನಿರಾಕರಿಸಿದೆ.

‘ವಿಧ್ಯೆಯಿಂದ ಸ್ವತಂತ್ರ, ಸಂಘಟನೆಯಿಂದ ಬಲ’ ಎಂಬ ಸಂದೇಶ ಸಾರಿದ ಸಂತ, ಮಾನವತಾವಾದಿ, ಸಮಾಜ ಸುಧಾರಕ, ಹಿಂದುಳಿದ, ಶೋಷಿತ, ತುಳಿತಕ್ಕೆ ಒಳಗಾದ ಸಮುದಾಯದ ಜನರನ್ನು ಮೇಲೆತ್ತಿದ, ಅವರ ಬದುಕಿನಲ್ಲಿ ಆಶಾಕಿರಣ ಮೂಡಿಸಿದವರು ನಾರಾಯಣ ಗುರುಗಳು ಅಕ್ಷರ ಬ್ರಹ್ಮ ಎಂದು ಬಣ್ಣಿಸಿದರು.

ADVERTISEMENT

ಮುಸ್ಲಿಂ, ಕ್ರಿಶ್ಚಿಯನ್ ಮತ್ತಿತರ ಸರ್ವ ಧರ್ಮಗಳ ಜನರು ಬಾಳ್ವೆಗಳ ಮೂಲಕ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಸಾರಿದ, ಧಾರ್ಮಿಕ ತತ್ವಾದರ್ಶಗಳ ಮೂಲಕ ನನಸು ಮಾಡುತ್ತ ಹೆಸರಾದ ಬ್ರಹ್ಮರ್ಷಿ ನಾರಾಯಣ ಗುರುಗಳು ಜಗಕೆ ತೋರಿದ ಬೆಳಕು ಮರೆಯಲು ಸಾಧ್ಯವಿಲ್ಲ. ಭಾರತೀಯ ದಾರ್ಶನಿಕರಾದ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೂರ್ ಇವರುಗಳು ಬ್ರಹ್ಮರ್ಷಿ ನಾರಾಯಣ ಗುರುಗಳ ಪ್ರಭಾವಕ್ಕೆ ಒಳಗಾಗಿ ಪ್ರೇರೆಪಣೆ ಪಡೆದಿದ್ದರು. ಇಂತಹ ಮನುಕುಲದ ದಿವ್ಯ ಜ್ಯೋತಿಯ ಸ್ತಬ್ಧ ಚಿತ್ರವನ್ನು ಕೇರಳ ಸರ್ಕಾರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಪ್ರದರ್ಶಿಸಲು ಕೇರಳ ರಾಜ್ಯದ ಹೆಮ್ಮೆಯ ಪ್ರತೀಕವಾಗಿ ಕಳುಹಿಸಿತ್ತು. ಕೇಂದ್ರ ಆಯ್ಕೆ ಸಮಿತಿ ತಿರಸ್ಕರಿಸಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರು.

ಸ್ತಬ್ಧ ಚಿತ್ರ ತಿರಸ್ಕಾರ ಕ್ಷಮಾರ್ಹವಲ್ಲದ ತಪ್ಪು. ಭಾರತೀಯ ಸುಧಾರಣಾ ಪರಂಪರೆಯ ತಿಳಿವಳಿಕೆ ಇಲ್ಲದ ಅಜ್ಞಾನದ ಪರಮಾವಧಿ, ಆಯ್ಕೆ ಸಮಿತಿಯಲ್ಲಿ ಇಂತಹ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ. ಸಮಾನತೆಯ ಸಮಾಜದ ಕನಸು ಕಾಣುವ ಪ್ರತಿಯೊಬ್ಬ ಭಾರತೀಯರು ಖಂಡಿಸಬೇಕು. ಇದು ಹಿಂದುಳಿದ, ಶೋಷಿತ, ದಲಿತ ಗುರುಗಳಿಗೆ, ಸಮಾಜಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಮುಖಂಡರಾದ ಪ್ರದೀಪ್, ಕೆ.ಎಲ್.ಉಮೇಶ್, ಕೆ.ಪಿ.ಲಿಂಗೇಶ್, ಬಿ.ಯೋಗೇಶ್, ವಿಜಯ್ ಕನ್ಯೆಮನೆ, ಎಸ್.ಪಿ.ವಿಜಯ್‌ಕುಮಾರ್, ಸುಧಾಕರ್ ಶೆಟ್ಟಿಹಳ್ಳಿ, ಎಸ್.ಎಂ.ಸಂದೀಪ್‌ಕುಮಾರ್ ಮತ್ತಿತರರು ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.