ADVERTISEMENT

ಕೃಷಿ ಕಾಯ್ದೆ ರದ್ದುಗೊಳಿಸಲು ಆಗ್ರಹ

ರೈಲು ತಡೆ ಚಳವಳಿ ತಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 3:14 IST
Last Updated 19 ಫೆಬ್ರುವರಿ 2021, 3:14 IST
ಸಾಗರದಲ್ಲಿ ಗುರುವಾರ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘ, ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು
ಸಾಗರದಲ್ಲಿ ಗುರುವಾರ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘ, ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು   

ಸಾಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ , ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾದ ಕಾರ್ಯಕರ್ತರು ಗುರುವಾರ ವೆಂಕಟರಮಣ ದೇವಸ್ಥಾನ ರಸ್ತೆಯ ರೈಲ್ವೆ ಗೇಟ್ ಬಳಿ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈಲು ತಡೆದು ಚಳವಳಿ ನಡೆಸಲು ಪ್ರತಿಭಟನಕಾರರು ಮುಂದಾಗಿದ್ದರು. ಮೈಸೂರು-ತಾಳಗುಪ್ಪ ರೈಲು ಬರುವ ಸಮಯಕ್ಕೆ ರೈಲ್ವೆ ಹಳಿಯ ಮೇಲೆ ಮಲಗಿದ್ದ ಪ್ರತಿಭಟನಕಾರರನ್ನು ಪೊಲೀಸರು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದರು.

ನಂತರ ಪ್ರತಿಭಟನಕಾರರು ರೈಲ್ವೆ ಹಳಿ ಪಕ್ಕದಲ್ಲಿ ಪ್ರತಿಭಟನೆ ಮುಂದುವರಿಸಿದರು.

ADVERTISEMENT

ರೈತ ಸಂಘದ ರಾಜ್ಯ ಮುಖಂಡ ಎನ್.ಕೆ. ಮಂಜುನಾಥ ಗೌಡ, ‘ರೈತರಿಗೆ ಬೇಡವಾಗಿರುವ ಕಾಯ್ದೆಗಳನ್ನು ಜಾರಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿದೆ. ಇಂತಹ ಸರ್ಕಾರಗಳನ್ನು ಜನರು ಕಸದ ಬುಟ್ಟಿಗೆ ಎಸೆಯುವವರೆಗೂ ರೈತ ಹೋರಾಟ ಮುಂದುವರಿಯಲಿದೆ’ ಎಂದರು.

‘ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ, ಬಂಡವಾಳಶಾಹಿಗಳ ಗುಲಾಮನಂತೆ ವರ್ತಿಸುತ್ತಿದೆ. ಕಾಯ್ದೆ ತಿದ್ದುಪಡಿ ಮೂಲಕ ಕೃಷಿ ಕ್ಷೇತ್ರವನ್ನು ಕಂಪನಿಗಳಿಗೆ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ. ಕೃಷಿಗೆ ಮರಣ ಶಾಸನ ಬರೆಯಲು ಸರ್ಕಾರ ಹೊರಟಿದೆ’ ಎಂದು ಆರೋಪಿಸಿದರು.

ಸಾಮಾಜಿಕ ಕಾರ್ಯಕರ್ತ ರಾಜಪ್ಪ ಮಾಸ್ತರ್, ‘ಕೇಂದ್ರ ಸರ್ಕಾರದ ಜನವಿರೋಧಿ ಕೃಷಿ ಕಾಯ್ದೆ ವಿರುದ್ಧ ಮಾತನಾಡುವವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸುವ ಕುಕೃತ್ಯಕ್ಕೆ ಮುಂದಾಗಿದೆ. ಯುವತಿ ದಿಶಾ ರವಿ ಅವರನ್ನು ಬಂಧಿಸಿರುವುದೇ ಇದಕ್ಕೆ ಸಾಕ್ಷಿ’ ಎಂದು ದೂರಿದರು.

‘ಮೂರು ತಿಂಗಳುಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಅಹವಾಲುಗಳನ್ನು ಸಮಾಧಾನದಿಂದ ಕೇಳುವ ಬದಲು ಚಳವಳಿ ನಡೆಸುತ್ತಿರುವವರು ರೈತರೇ ಅಲ್ಲ ಎಂಬ ಸುಳ್ಳು ಸುದ್ದಿಯನ್ನು ಸರ್ಕಾರ ಹಬ್ಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.

ರೈತ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಅರುಣ್ ಕಸವೆ, ಪ್ರಮುಖರಾದ ಗುರುಮೂರ್ತಿ ಕೌತಿ, ಈಶ್ವರಪ್ಪ, ಬಿ.ಪಿ.ವೀರಭದ್ರಪ್ಪ, ಶಿವಣ್ಣ, ಈರನಗೌಡ, ನಾಗರಾಜ್ ಬೆಣೆಗೇರಿ, ಮೇಘರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.