ಪ್ರಜಾವಾಣಿ ವಾರ್ತೆ
ಸಾಗರ: ‘ಮನುಷ್ಯನಲ್ಲಿ ಅಪರಿಮಿತ ಆಸೆ ಹುಟ್ಟಿಸಿ ಉಪಭೋಗ ಸಂಸ್ಕೃತಿಗೆ ದಾಸರಾಗುವಂತೆ ಅಭಿವೃದ್ಧಿಯ ಪರಿಕಲ್ಪನೆ ರೂಪುಗೊಂಡಿದೆ. ನೆಮ್ಮದಿಯ ಬದುಕು ಕಲ್ಪಿಸುವ ಹೊಸ ದೃಷ್ಟಿಕೋನದ ಅಭಿವೃದ್ಧಿಯ ಪರಿಕಲ್ಪನೆ ನಮ್ಮದಾಗಬೇಕಿದೆ’ ಎಂದು ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನ ಪರಿಸರ ಕಾರ್ಯಕರ್ತ ಸುಮನಸ ಕೌಲಗಿ ಹೇಳಿದರು.
ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಶನಿವಾರ ನಡೆದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ‘ಪರಿಸರದ ಕಾರ್ಯಶೀಲತೆ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗಾಂಧೀಜಿ ಹಾಗೂ ಜೆ.ಸಿ.ಕುಮಾರಪ್ಪ ಪ್ರತಿಪಾದಿಸಿದ ಸತ್ಯ ಮತ್ತು ಪ್ರೀತಿಯ ಮೇಲೆ ಸಮಾಜವನ್ನು ಕಟ್ಟುವ ಸ್ವರಾಜ್ಯ ಕಲ್ಪನೆಯ ಆರ್ಥಿಕ ಮಾದರಿ ನಮ್ಮದಾಗಬೇಕಿದೆ. ಇದು ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳುವ ಜೊತೆಗೆ ಇತರರ ಬದುಕು ಹಸನಾಗಬೇಕು ಎಂಬ ಭಾವನೆ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಜವಾನರ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಸ್ನಾತಕೋತ್ತರ ಪದವಿ ಪಡೆದವರೂ ಸಾವಿರಾರು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿರುವುದು ಆಧುನಿಕ ಶಿಕ್ಷಣ ಪದ್ಧತಿಯ ವೈಫಲ್ಯದ ಪ್ರತಿಬಿಂಬ. ಅಕ್ಷರ ಮಾತ್ರ ಶಿಕ್ಷಣವಲ್ಲ, ಜ್ಞಾನ ಎಂಬ ಅರಿವು ಮೂಡಬೇಕಿದೆ. ನಮ್ಮ ಅವಶ್ಯಕತೆಗಳನ್ನು ಆದಷ್ಟು ಕಡಿಮೆ ಮಾಡಿಕೊಂಡು ಸರಳವಾಗಿ ಬದುಕುವ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು ಎಂದು ಪ್ರತಿಪಾದಿಸಿದರು.
‘ಮನುಷ್ಯ ತನ್ನನ್ನು ಹೊರತುಪಡಿಸಿಕೊಂಡು ಪರಿಸರದ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಉದಾತ್ತ ಮನಸ್ಸುಗಳೂ ತಮ್ಮ ಅಹಂನ ಕೋಟೆಯೊಳಗೆ ಸಿಲುಕಿರುವುದು ಪರಿಸರದ ಸಮಸ್ಯೆ ಉಲ್ಬಣಿಸಲು ದಾರಿ ಮಾಡಿಕೊಟ್ಟಿದೆ’ ಎಂದು ಚಾಮರಾಜ ನಗರದ ದೀನಬಂಧು ಸೇವಾ ಟ್ರಸ್ಟ್‌ನ ಜಿ.ಎಸ್.ಜಯದೇವ ಅಭಿಪ್ರಾಯಪಟ್ಟರು.
ಪರಿಸರದ ಕುರಿತು ಆದಿವಾಸಿಗಳಿಗೆ ಇರುವ ‘ನಿಸರ್ಗ ವಿವೇಕ’ ನಮ್ಮ ನಾಗರಿಕ ಸಮಾಜಕ್ಕೆ ಇಲ್ಲವಾಗಿದೆ. ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳೆಲ್ಲವನ್ನೂ ಬೌದ್ಧಿಕ ನೆಲೆಯಲ್ಲಿ ನೋಡಿ ವಿಶ್ಲೇಷಿಸುವುದು ಸರಿಯಾದ ಕ್ರಮವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕೆ.ವಿ.ಅಕ್ಷರ ಸಂವಾದವನ್ನು ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.