ADVERTISEMENT

ಸರ್ಕಾರಿ ಶಾಲೆಗೆ ಧಾನಿಗಳ ಕೊಡುಗೆ ಶ್ಲಾಘನೀಯ: ಶಿಕ್ಷಣಾಧಿಕಾರಿ ವೈ. ಗಣೇಶ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:08 IST
Last Updated 19 ಜನವರಿ 2026, 4:08 IST
ಹೊಂಬುಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಸೂರು -ನಾಗರಹಳ್ಳಿ ಸರ್ಕಾರಿ ಶಾಲೆಗೆ ಪೀಠೋಪಕರಣ ನೀಡಿದ ದಾನಿಗಳನ್ನು ಈಚೆಗೆ ಸನ್ಮಾನಿಸಲಾಯಿತು
ಹೊಂಬುಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಸೂರು -ನಾಗರಹಳ್ಳಿ ಸರ್ಕಾರಿ ಶಾಲೆಗೆ ಪೀಠೋಪಕರಣ ನೀಡಿದ ದಾನಿಗಳನ್ನು ಈಚೆಗೆ ಸನ್ಮಾನಿಸಲಾಯಿತು   

ರಿಪ್ಪನ್‌ಪೇಟೆ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳ ಕುಂದು ಕೊರತೆಗಳ ಬಗ್ಗೆ ಸ್ಥಳೀಯರು ಗಮನಹರಿಸಿ, ಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೊಸನಗರದ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ಹೇಳಿದರು.

ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ (ನಾಗರಹಳ್ಳಿ) ವಾರ್ಷಿಕೋತ್ಸವ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬೆಳ್ಳೂರು ಶಿವಮೂರ್ತಿ ಮಾತನಾಡಿ, ‘ವರ್ತಮಾನ ಕಾಲಘಟ್ಟದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕೀಳರಿಮೆ ತೊರೆದು ಕಲಿಕೆಯಲ್ಲಿ ಆಸಕ್ತಿ ಹೊಂದಬೇಕು’ ಎಂದರು. 

ADVERTISEMENT

ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಾಲೆಗೆ ಅತ್ಯಗತ್ಯವಾದ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಕರಗಳನ್ನು ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಎಸ್.ಎಂ. ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಂಗಲ ದೇವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಹೊಂಬುಜ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು, ಎಸ್‌ಡಿಎಂಸಿ ಸದಸ್ಯರು, ಹಾಗೂ ಸಿಆರ್‌ಪಿ  ತೀರ್ಥಪ್ಪ ಹಾಜರಿದ್ದರು. ಮುಖ್ಯಶಿಕ್ಷಕ ಶಿವಕುಮಾರ್ ಸ್ವಾಗತಿಸಿದರು. ಶಿಕ್ಷಕ ಅಣ್ಣಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.