ADVERTISEMENT

ಸವಾರರಿಗೆ ಸಿಂಹಸ್ವಪ್ನವಾದ ರಸ್ತೆ ವಿಭಜಕ ಕಂಬಿಗಳು

ಪ್ರಯಾಣಿಕರು ಜೀವ ಕೈಯಲ್ಲಿಡಿದು ಸಂಚರಿಸುವ ಸ್ಥಿತಿ ನಿರ್ಮಾಣ

ಅನಿಲ್ ಸಾಗರ್
Published 24 ಜೂನ್ 2018, 14:32 IST
Last Updated 24 ಜೂನ್ 2018, 14:32 IST
ಶಿವಮೊಗ್ಗ ಸವಳಂಗ ರಸ್ತೆಯಲ್ಲಿ ರಸ್ತೆಗೆ ಚಾಚಿರುವ ವಿಭಜಕ ಕಂಬಿ.ಚಿತ್ರಗಳು: ಶಿವಮೊಗ್ಗ ನಾಗರಾಜ್.
ಶಿವಮೊಗ್ಗ ಸವಳಂಗ ರಸ್ತೆಯಲ್ಲಿ ರಸ್ತೆಗೆ ಚಾಚಿರುವ ವಿಭಜಕ ಕಂಬಿ.ಚಿತ್ರಗಳು: ಶಿವಮೊಗ್ಗ ನಾಗರಾಜ್.   

ಶಿವಮೊಗ್ಗ: ಪ್ರಯಾಣಿಕರ ಸುಗಮ ಸಂಚಾರಕ್ಕೆಂದು ನಗರದೆಲ್ಲೆಡೆ ಹಾಕಿರುವ ರಸ್ತೆ ವಿಭಜಕ ಕಂಬಿಗಳೇ ಇದೀಗ ಸವಾರರ ಪಾಲಿಗೆ ಸಿಂಹಸ್ವಪ್ನವಾಗಿವೆ.

ಹೌದು, ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರ ಸುಗಮ ಸಂಚಾರದ ದೃಷ್ಟಿಯಿಂದ ನಗರದ ಹಲವು ರಸ್ತೆಗಳ ಮಧ್ಯಭಾಗದಲ್ಲಿ ವಿಭಜಕಗಳನ್ನು ಹಾಕಲಾಗಿದೆ. ಆದರೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ರಸ್ತೆ ವಿಭಜಕಗಳೇ ಇಂದು ಸವಾರರನ್ನು ಬಲಿಪಡೆಯಲು ಕಾದುಕೊಂಡಿವೆ.

ನಗರದ ಹಲವೆಡೆ ರಸ್ತೆ ವಿಭಜಕ ಕಂಬಿಗಳು ಮುರಿದು ಬಿದ್ದಿವೆ. ಕೆಲವು ಕಡೆ ಬಾಗಿ ರಸ್ತೆಗೆ ಚಾಚಿಕೊಂಡಿವೆ. ಪ್ರಯಾಣಿಕರು ಇವುಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಅಪಘಾತಗಳಿಗೂ ಕಾರಣವಾಗಿವೆ. ರಸ್ತೆ ವಿಭಜಕಗಳ ದುಸ್ಥಿತಿಯನ್ನು ಗಮನಿಸಿಯೂ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತಿದ್ದಾರೆ. ಇತ್ತ ಪ್ರಯಾಣಿಕರು ಮಾತ್ರ ಜೀವ ಕೈಯಲ್ಲಿಡಿದು ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ರಾತ್ರಿವೇಳೆ ಸಂಚಾರ ಕಷ್ಟ: ರಸ್ತೆ ವಿಭಜಕಗಳು ರಸ್ತೆಗೆ ಚಾಚಿಕೊಂಡಿರುವ ಪರಿಣಾಮ ರಾತ್ರಿ ವೇಳೆಯಲ್ಲಿ ಪ್ರಯಾಣಿಸುವವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಬೀದಿ ದೀಪದ ವ್ಯವಸ್ಥೆ ಇಲ್ಲದ ಭಾಗಗಳಲ್ಲಂತೂ ಸಮಸ್ಯೆ ತೀವ್ರವಾಗಿದೆ. ಮಕ್ಕಳು, ಮಹಿಳೆಯರು, ಹಿರಿಯರನ್ನು ಕರೆದೊಯ್ಯುವ ಬೈಕ್‌ ಸವಾರರು ರಸ್ತೆ ಮಧ್ಯದಿಂದ ಹೊರಗೆ ಚಾಚಿರುವ ಕಂಬಿಗಳನ್ನು ತಪ್ಪಿಸಿಕೊಂಡು ಓಡಾಡುವುದರಲ್ಲಿ ಹೈರಾಣಾಗಿದ್ದಾರೆ. ಹೊಸದಾಗಿ ಸಂಚರಿಸುವ ಪ್ರಯಾಣಿಕರ ಪಾಡು ಹೇಳತೀರದಂತಾಗಿದೆ.

ಒಂದೆಡೆ ಶಿವಮೊಗ್ಗದಲ್ಲಿ ದಿನೇದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಪ್ರಯಾಣಿಕರು ಸುಗಮವಾಗಿ ಸಂಚರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ರಸ್ತೆಯಲ್ಲಿ ಬಾಗಿದ ಕಂಬಿಗಳು, ರಸ್ತೆಯಲ್ಲಿ ಬಿದ್ದಿರುವ ವಿಭಜಕಗಳು ದಿಢೀರ್‌ ಎದುರಾಗುವುದರಿಂದ ಪ್ರಯಾಣಿಕರು ಅವುಗಳನ್ನು ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೀಡಾಗುತ್ತಿದ್ದಾರೆ. ಹಲವರು ಸಣ್ಣಪುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿರುವ ಉದಾಹರಣೆಯೂ ಇದೆ.

ಜಾಣ ಕುರುಡುತನ:ರಸ್ತೆ ವಿಭಜಕಗಳಿಂದ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಹಲವು ವರ್ಷಗಳಿಂದ ಈ ಸಮಸ್ಯೆ ನಗರದಲ್ಲಿದೆ. ಆದರೆ ಪೊಲೀಸ್‌ ಇಲಾಖೆಯಲಾಗಲಿ, ಲೋಕೋಪಯೋಗಿ ಇಲಾಖೆಯಲ್ಲಿ ಈ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಪ್ರಯಾಣಿಕರು ಸಹ ಇಂದು ಅಥವಾ ನಾಳೆ ಸಮಸ್ಯೆ ಇತ್ಯರ್ಥವಾಗುವುದು ಎನ್ನುವ ಭರವಸೆಯಲ್ಲಿಯೇ ದಿನಗಳನ್ನು ನೂಕುತ್ತಿದ್ದಾರೆ. ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸವಾರರು ಮುಂದೆ ಮತ್ತಷ್ಟು ಸಮಸ್ಯೆ ಎದುರಿಸುವ ಮುನ್ನವೇ ರಸ್ತೆ ವಿಭಜಕಗಳನ್ನು ಸರಿಪಡಿಸುವ ಕಾರ್ಯ ಸಂಬಂಧಪಟ್ಟವರಿಂದ ಆಗಬೇಕಿದೆ.

ಸಾರ್ವಜನಿಕರ ಒತ್ತಾಯ:ರಸ್ತೆ ವಿಭಜಕಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಸಹಾಯ ಮಾಡುವಂತಿರಬೇಕು. ಆದರೆ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಲು ರಸ್ತೆಗೆ ಚಾಚಿರುವ ಕಂಬಿಗಳೇ ಪ್ರಮುಖ ಕಾರಣವಾಗಿವೆ. ಸಮಸ್ಯೆ ಹೀಗೇ ಇದ್ದರೆ ಮುಂದೆ ಮತ್ತಷ್ಟು ಅನಾಹುತಗಳು ಸಂಭವಿಸುವುದರಲ್ಲಿ ಅನುಮಾನವಿಲ್ಲ. ಹೊಸ ಪ್ರಯಾಣಿಕರ ಸಮಸ್ಯೆ ಹೇಳತೀರದಂತಾಗಿದೆ.ಅಲ್ಲದೇ ವೇಗವಾಗಿ ಬರುವ ಸವಾರರು ರಸ್ತೆ ಚಾಚಿರುವ ವಿಭಜಕ ಕಂಬಿಗಳನ್ನು ಕಂಡು ದಿಢೀರ್‌ ಬ್ರೇಕ್‌ ಹಾಕಲು ಹೋಗಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಸಂಬಂಧಪಟ್ಟವರು ಶೀಘ್ರವೇ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದಿನ ಸವಳಂಗ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ವಿಭಜಕ ಕಂಬಿಗಳು ರಸ್ತೆಗೆ ಚಾಚಿರವುದು ಗಮನಕ್ಕಿದೆ. ಆದರೆ ಹೊಸ ಪ್ರಯಾಣಿಕರು ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ
ಪ್ರಸನ್ನಕುಮಾರ್, ವಾಹನ ಸವಾರ.

ಅನೇಕ ಕಡೆ ರಸ್ತೆ ವಿಭಜಕಗಳು ರಸ್ತೆಗೆ ಚಾಚಿವೆ. ಕೆಲವೆಡೆ ಮುರಿದು ಬಿದ್ದಿವೆ. ಇದರಿಂದ ರಾತ್ರಿ ವೇಳೆ ಸಂಚರಿಸುವಾಗ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ಈ ಸಮಸ್ಯೆ ಬಗೆಹರಿಸಬೇಕು.
ಗುರುರಾಜ್‌, ವಾಹನ ಸವಾರ.

ಈಗಾಗಲೇ ಕೆಲವೆಡೆ ಹಾಳಾದ ರಸ್ತೆ ವಿಭಜಕಗಳನ್ನು ಸರಿಪಡಿಸಲಾಗಿದೆ. ಇನ್ನು ಎಲ್ಲೆಲ್ಲಿ ಈ ರೀತಿಯ ಸಮಸ್ಯೆ ಇದೆ ಎಂಬುದನ್ನು ನೋಡಿ ಸರಿಪಡಿಸಲಾಗುವುದು.
ಅಭಿನವ್‌ ಖರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.