
ಶಿವಮೊಗ್ಗ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರೂಪ್ಲಾ ನಾಯ್ಕ ಅವರಿಗೆ ಸೇರಿದ ಆರು ಸ್ಥಳಗಳಲ್ಲಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಆದಾಯಕ್ಕಿಂತ ಶೇ 107ರಷ್ಟು ಹೆಚ್ಚು ಆಸ್ತಿ ಪತ್ತೆ ಮಾಡಿದ್ದಾರೆ.
ಶಿವಮೊಗ್ಗದ ಬಸವನ ಗುಡಿಯಲ್ಲಿರುವ ರೂಪ್ಲಾ ನಾಯ್ಕ ಅವರ ಬಾಡಿಗೆ ಮನೆ, ಇಲ್ಲಿನ ಪ್ರೆಸ್ ಟ್ರಸ್ಟ್ ಪಕ್ಕದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿ, ಅವರ ಆಪ್ತರೊಬ್ಬರ ವಿದ್ಯಾನಗರದ ನಿವಾಸ, ಸ್ವಂತ ಊರು ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ ಬಳಿಯ ಹಳ್ಳಿಹಟ್ಟಿಯ ನಿವಾಸ, ತೋಟದ ಹೌಸ್, ಬೆಂಗಳೂರಿನ ಕೆಂಗೇರಿ ಉಪನಗರದ ಪನೋರಮಾ ಬ್ರಿಗೇಡ್ ಅಪಾರ್ಟ್‌ಮೆಂಟ್‌ನಲ್ಲಿನ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.
ತಪಾಸಣೆ ವೇಳೆ ₹ 1.94 ಕೋಟಿ ಮೌಲ್ಯದ ಆರು ನಿವೇಶನಗಳು, ₹ 1 ಕೋಟಿ ಮೌಲ್ಯದ ಎರಡು ಮನೆಗಳು, ಮೂರೂವರೆ ಎಕರೆ ಕೃಷಿ ಭೂಮಿ ಸೇರಿದಂತೆ ₹ 2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹ 32,300 ನಗದು ಪತ್ತೆಯಾಗಿದೆ. 655 ಗ್ರಾಂ ಚಿನ್ನಾಭರಣ, ₹ 18 ಲಕ್ಷ ಮೌಲ್ಯದ ವಾಹನಗಳು ಸೇರಿ ₹ 1.99 ಕೋಟಿ ಮೌಲ್ಯದ ಚರಾಸ್ತಿ ದೊರೆತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.