ಶಿವಮೊಗ್ಗ: ಕೊರೊನಾ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತರನ್ನು ಒಳಗೊಂಡ ಕಾರ್ಯಪಡೆ
ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಲ್ಲೆಯಲ್ಲಿ ಈಚೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಕೋವಿಡ್ ಜನ ಜಾಗೃತಿಗಾಗಿ ಗ್ರಾಮ ಮಟ್ಟದಲ್ಲಿ ಮತ್ತು ಗ್ರಾಮಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಕಾರ್ಯಪಡೆ ಕೆಲಸ ಮಾಡಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಪಡೆಯಲ್ಲಿ ಸುಮಾರು 8ರಿಂದ 10 ಜನರು ಇರುತ್ತಾರೆ. ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಶೀತ, ನೆಗಡಿ, ಜ್ವರ ಕಂಡು ಬಂದ ಜನರನ್ನುಆಸ್ಪತ್ರೆಗೆ ದಾಖಲಿಸುವುದು ಈ ಕಾರ್ಯಪಡೆಯ ಕೆಲಸವಾಗಿದೆ. ಇದಕ್ಕೆ ತಗುಲುವ ವೆಚ್ಚವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು15ನೇ ಹಣಕಾಸು ನಿಧಿಯಡಿ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.
ಪ್ರಧಾನ ಮಂತ್ರಿ ಘೋಷಣೆ ಮಾಡಿರುವ ಮಳೆ ನೀರು ಇಂಗಿಸುವ ಜಲಶಕ್ತಿ ಅಭಿಯಾನ ರಾಜ್ಯದಾದ್ಯಂತ ಈಗಾಗಲೇ ಆರಂಭವಾಗಿದ್ದು, ಈ ಅಭಿಯಾನದಡಿ ಕೆರೆಗಳ ಪುನಶ್ಚೇತನ, ಕಿರುಗಾಲುವೆ ಅಭಿವೃದ್ಧಿ, ಕಲ್ಯಾಣಿಗಳ ಸ್ವಚ್ಛತೆ, ಸಣ್ಣ ರೈತರ ತೋಟ, ಹೊಲಗಳ ಬದು ನಿರ್ಮಾಣ, ಗೋಕಟ್ಟೆಗಳ ನಿರ್ಮಾಣ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿನೀಡಿದರು.
ಜಲಶಕ್ತಿ ಅಭಿಯಾನಕ್ಕೆ ಚಾಲನೆ: ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ನಿಗದಿತ ಗುರಿ 13 ಕೋಟಿ ಮಾನವ ದಿನಗಳನ್ನು ಮುಗಿಸಿ ಹೆಚ್ಚುವರಿಯಾಗಿ 8 ಕೋಟಿ ಮಾನವದಿನಗಳನ್ನು ಬಳಸಿಕೊಳ್ಳಲಾಗಿದೆ. ಈ ವರ್ಷವೂ ಯಾವುದೇ ಗುರಿಯಿಲ್ಲದೆ ಉದ್ಯೋಗ ಖಾತ್ರಿ ಕೆಲಸಗಳನ್ನು ನಡೆಸಲಾಗುವುದು. ಏ. 19ರಂದು ಶಿವಮೊಗ್ಗದ ಪಿಳ್ಳಂಗಿರಿಯ ಕೆರೆ ಪುನಶ್ಚೇತನ ಕಾಮಗಾರಿಯನ್ನು ಉದ್ಘಾಟಿಸುವ ಮೂಲಕ ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದುತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.