ಸಾಗರ: ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಕಟ್ಟಡ ₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಆದರೆ, ಇಲ್ಲಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಒಂದೇ ಒಂದು ಕುರ್ಚಿಯೂ ಇಲ್ಲ. ತಹಶೀಲ್ದಾರ್ ಕೊಠಡಿ ಮೊದಲ ಮಹಡಿಯಲ್ಲಿದೆ. ಕಟ್ಟಡದ ಲಿಫ್ಟ್ ವಾರದಲ್ಲಿ ನಾಲ್ಕು ದಿನ ಕೆಟ್ಟಿರುತ್ತದೆ. ವೃದ್ಧರು, ಅಂಗವಿಕಲರು ತಹಶೀಲ್ದಾರ್ ಅವರನ್ನು ಭೇಟಿ ಮಾಡಲು ಪ್ರಯಾಸ ಪಡಬೇಕಿದೆ.
ಪ್ರತಿಯೊಂದು ಸರ್ಕಾರಿ ಕಚೇರಿಗೆ ಅಂಗವಿಕಲರು ಗಾಲಿ ಕುರ್ಚಿಯ ಮೂಲಕ ಬರಲು ಅನುಕೂಲ ಆಗುವಂತೆ ರ‍್ಯಾಂಪ್ ನಿರ್ಮಿಸಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಆ ವ್ಯವಸ್ಥೆ ಇಲ್ಲ.
ನೂತನ ಕಟ್ಟಡಕ್ಕೆ ತಾಲ್ಲೂಕು ಕಚೇರಿ ವರ್ಗಾವಣೆಗೊಂಡು ವರ್ಷ ಕಳೆದಿದ್ದರೂ ‘ಭೂಮಿ’ ಕೇಂದ್ರ ಇನ್ನೂ ಹಳೆಯ ಕಟ್ಟಡದಲ್ಲೇ ಇದೆ. ಖಾತೆ ಬದಲಾವಣೆ ಸೇರಿದಂತೆ ಪ್ರಮುಖ ಕೆಲಸಗಳಿಗೆ ಸಾರ್ವಜನಿಕರನ್ನು ಹೊಸ ಕಟ್ಟಡದಿಂದ ಹಳೆಯ ಕಟ್ಟಡಕ್ಕೆ, ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಅಲೆಸಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಕಳೆದ ವರ್ಷ ತಾಲ್ಲೂಕಿನ ಹಲವು ಕಂದಾಯ ಗ್ರಾಮಗಳನ್ನು ಒಡೆದು ಅಕ್ಕಪಕ್ಕದ ಗ್ರಾಮಗಳಿಗೆ ಸೇರಿಸಲಾಗಿದೆ. ಆದರೆ ಹೀಗೆ ಹೊಸ ಗ್ರಾಮಕ್ಕೆ ಸೇರಿಸಲಾದ ಪ್ರದೇಶದ ಸರ್ವೆ ನಂಬರ್‌ಗಳಿಗೆ ಸಾಫ್ಟ್‌ವೇರ್ ಸಮಸ್ಯೆಯಿಂದ ಹೊಸ ಸಂಖ್ಯೆ ಕೊಡಲು ಸಾಧ್ಯವಾಗುತ್ತಿಲ್ಲ.
ಹೊಸ ಗ್ರಾಮಕ್ಕೆ ವರ್ಗಾವಣೆಯಾದ ಕಾರಣ ಹಳೆಯ ಪಹಣಿ ದೊರಕುತ್ತಿಲ್ಲ. ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಹೊಸ ಸಂಖ್ಯೆಯ ಪಹಣಿ ಕೂಡ ಲಭ್ಯವಾಗದೆ ಗ್ರಾಮಸ್ಥರು ಪರದಾಡುವಂತಾಗಿದೆ.
ಪಹಣಿ ಇಂಡೀಕರಣಕ್ಕೆ ಸಂಬಂಧಿಸಿದಂತೆ ಸಣ್ಣ ಸಣ್ಣ ಸರ್ವೇ ನಂಬರ್‌ಗಳ ಇಂಡೀಕರಣವನ್ನು ಮಾತ್ರ ಕೈಗೊಳ್ಳಲಾಗುತ್ತಿದೆ. ಒಂದೆ ಸರ್ವೇ ನಂಬರ್‌ನಲ್ಲಿ ಹೆಚ್ಚು ಜನರ ಹೆಸರು ಇದ್ದರೆ ತಮಗೆ ಹೆಚ್ಚಿನ ಕೆಲಸದ ಹೊರೆಯಾಗುತ್ತದೆ ಎನ್ನುವ ಕಾರಣಕ್ಕೆ ಸಿಬ್ಬಂದಿ ಆ ಕೆಲಸವನ್ನೇ ಮಾಡುತ್ತಿಲ್ಲ. ತಾಲ್ಲೂಕು ಕಚೇರಿಯಿಂದ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರಿಗೆ ವರದಿ ಕೇಳಿ ಕಳುಹಿಸುವ ಕಡತಗಳು 4 ತಿಂಗಳಾದರೂ ಮರಳಿ ಬರುತ್ತಿಲ್ಲ. ತಮ್ಮ ಕಡತ ಏನಾಯಿತು? ಎಂದು ಜನರೇ ಹುಡುಕಿ ಮರಳಿ ತಾಲ್ಲೂಕು ಕಚೇರಿಗೆ ತರಿಸಲು ಪರದಾಡಬೇಕಾಗಿದೆ ಎಂದು ದೇಸಿ ಸೇವಾ ಬ್ರಿಗೇಡ್‌ನ ಅಧ್ಯಕ್ಷ ಶ್ರೀಧರ ಮೂರ್ತಿ ದೂರುತ್ತಾರೆ.
‘ಪ್ರತಿ ತಿಂಗಳು ತಾಲ್ಲೂಕು ಕಚೇರಿಯಿಂದ ಎಷ್ಟು ಕಡತಗಳನ್ನು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರಿಗೆ ಕಳುಹಿಸಲಾಗುತ್ತಿದೆ, ಅಲ್ಲಿಂದ ಎಷ್ಟು ಕಡತಗಳು ಯಾವ ಅವಧಿಯೊಳಗೆ ಮರಳಿ ತಾಲ್ಲೂಕು ಕಚೇರಿಗೆ ಬಂದಿವೆ ಎನ್ನುವ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.
ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ತಮ್ಮ ಕೇಂದ್ರ ಸ್ಥಾನದಲ್ಲಿರದೇ ನಗರದ ವಿವಿಧೆಡೆ ಖಾಸಗಿ ಕಟ್ಟಡಗಳಲ್ಲಿ ತಮ್ಮದೇ ಕಚೇರಿ ಮಾಡಿಕೊಂಡಿದ್ದಾರೆ. ಇದರಿಂದ ಜನರ ಕೆಲಸಗಳು ಆಗುತ್ತಿಲ್ಲ. ಹೋಬಳಿಗಳಲ್ಲಿನ ನಾಡಕಚೇರಿಯ ಉಪ ತಹಶೀಲ್ದಾರ್ ಅವರೂ ಕೇಂದ್ರ ಸ್ಥಾನದಲ್ಲಿರದ ಕಾರಣ ನಿಗದಿತ ಸಮಯಕ್ಕೆ ಕಚೇರಿಯ ಬಾಗಿಲನ್ನೇ ತೆಗೆಯುತ್ತಿಲ್ಲ. ಕೆಲವೆಡೆ ಮಧ್ಯಾಹ್ನ 12 ಗಂಟೆ ನಂತರ ಅಧಿಕಾರಿಗಳು ಕಚೇರಿಗೆ ಬರುತ್ತಾರೆ ಎಂಬುದು ಜನರ ಆರೋಪ.
ಜನಸ್ನೇಹಿ ಆಡಳಿತ ದೊರೆಯದ ಬಗ್ಗೆ ಕಳೆದ ತಿಂಗಳು ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಆಡಳಿತ ಸೌಧದ ಕಚೇರಿಯ ಅವ್ಯವಸ್ಥೆ ವಿಷಯ ಪ್ರಮುಖವಾಗಿ ಚರ್ಚೆಯಾಗಿತ್ತು.
ಈ ಕಚೇರಿಯಲ್ಲಿನ ಅವ್ಯವಸ್ಥೆಗಳನ್ನು ಶೀಘ್ರ ಸರಿಪಡಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಆದರೂ ಈವರೆಗೆ ಅ ಕುರಿತು ಕ್ರಮವಾಗಿಲ್ಲ. ಜನಪ್ರತಿನಿಧಿಗಳು ಈ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿ ಸಕಾಲದಲ್ಲಿ ಸಾರ್ವಜನಿಕರ ಕೆಲಸ ಆಗುವಂತೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Quote - ತಾಲ್ಲೂಕು ಕಚೇರಿಯ ನೂತನ ಕಟ್ಟಡದ ಪೀಠೋಪಕರಣ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಅದು ಮುಗಿದ ನಂತರ ಅಗತ್ಯವಿರುವ ಕುರ್ಚಿ ಟೇಬಲ್ ಪೂರೈಸಲಾಗುವುದು ಚಂದ್ರಶೇಖರ್ ನಾಯ್ಕ್ ತಹಶೀಲ್ದಾರ್
Quote - ತಾಲ್ಲೂಕು ಆಡಳಿತ ಸೌಧಕ್ಕೆ ನೂತನ ಕಚೇರಿ ನಿರ್ಮಾಣವಾಗಿದ್ದರೂ ಅಲ್ಲಿ ಜನರ ಕೆಲಸಗಳು ಸುಲಭವಾಗಿ ಆಗುತ್ತಿಲ್ಲ. ಈ ವಿಷಯದಲ್ಲಿ ಜನರು ರೋಸಿ ಹೋಗಿದ್ದಾರೆ. ಈ ಬಗ್ಗೆ ನಮ್ಮ ಸಂಘಟನೆಯಿಂದ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ ಶ್ರೀಧರ ಮೂರ್ತಿ ಅಧ್ಯಕ್ಷ ದೇಸಿ ಸೇವಾ ಬ್ರಿಗೇಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.