ADVERTISEMENT

ಹಾಲು ವಿತರಕರ ಬೇಡಿಕೆಗಳಿಗೆ ಸ್ಪಂದಿಸದ ಕೆಎಂಎಫ್

ಹಾಲು ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್ ಆರೋಪ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:35 IST
Last Updated 28 ಸೆಪ್ಟೆಂಬರ್ 2025, 5:35 IST

ಸಾಗರ: ‘ನಂದಿನಿ ಹಾಲು ವಿತರಕರ ಬೇಡಿಕೆಗಳಿಗೆ ಕೆಎಂಎಫ್ ಸ್ಪಂದಿಸುತ್ತಿಲ್ಲ’ ಎಂದು ಹಾಲು ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್ ದೂರಿದ್ದಾರೆ.

‘ಹಲವು ವರ್ಷಗಳಿಂದ ಕಮಿಷನ್ ಆಧಾರದ ಮೇಲೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರು ಹಲವು ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಕೆಎಂಎಫ್ ಅಧಿಕಾರಿಗಳ ಗಮನ ಸೆಳೆದರೂ ನಿರ್ಲಕ್ಷ್ಯಧೋರಣೆ ತಾಳಲಾಗುತ್ತಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಈ ಮೊದಲು ಹಾಲು ಪೂರೈಕೆಯಾದ ನಂತರ ವಿತರಕರಿಂದ ಹಣ ಪಡೆಯಲಾಗುತ್ತಿತ್ತು. ತದನಂತರ ಆನ್‌ಲೈನ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಜಾರಿಯಾಗಿದೆ. ವಿತರಕರು ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಆನ್‌ಲೈನ್ ಪಾವತಿ ವ್ಯವಸ್ಥೆಯಲ್ಲಿ ವಿತರಕರಿಗೆ ಹಲವು ರೀತಿಯ ವಂಚನೆಗಳಾಗುತ್ತಿವೆ’ ಎಂದು ದೂರಿದರು.

ADVERTISEMENT

‘ವಿತರಕರಿಗೆ ಆಗುತ್ತಿರುವ ಮೋಸ, ಕಿರುಕುಳವನ್ನು ವಿರೋಧಿಸಿ ಸೆ.30ರಂದು ಇಲ್ಲಿನ ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಸ್ಯೆಗೆ ಪರಿಹಾರ ದೊರಕದಿದ್ದರೆ ಅ.1ರಂದು ತಾಲ್ಲೂಕಿನಾದ್ಯಂತ ನಂದಿನಿ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ನಿಲ್ಲಿಸಲಾಗುವುದು’ ಎಂದು ಎಚ್ಚರಿಸಿದರು.

ಹಾಲು ವಿತರಕರಾದ ಲಕ್ಷ್ಮಣ್, ಕೆಂಪರಾಜ್, ಪ್ರಶಾಂತ್, ಮಾಲತೇಶ್, ಅಜಯ್, ಸುವರ್ಣ ಉಪಾಧ್ಯಾಯ, ಭಾರ್ಗವ, ಗುತ್ಯಪ್ಪ, ರಮೇಶ್, ಲೋಕೇಶ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.