
ಸಾಗರ: ಇಲ್ಲಿನ ನೆಹರೂ ಮೈದಾನದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಶುಕ್ರವಾರ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಚಾಂಪಿಯನ್‌ಷಿಪ್ ಪ್ರೇಕ್ಷಕರ ಮನಸೂರೆಗೊಂಡಿತು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ಪೈಲ್ವಾನರ ಪಟ್ಟು, ಪ್ರತಿಪಟ್ಟುಗಳನ್ನು ಕಂಡು ನೋಡುಗರು ಪುಳಕಿತರಾದರು.
ಮಥುರಾದ ರಾಮ್ ಹಾಗೂ ಶಿಕಾರಿಪುರ ತಾಲ್ಲೂಕಿನ ಮಾಸೂರಿನ ಅಕ್ರಂ ಅವರ ನಡುವೆ 15 ನಿಮಿಷಗಳವರೆಗೆ ಜಂಗಿ ಕುಸ್ತಿ ನಡೆಯಿತು. ನಿಗದಿತ 10 ನಿಮಿಷಗಳಲ್ಲಿ ಇಬ್ಬರೂ ಸಮಬಲದ ಹೋರಾಟ ನಡೆಸಿದರು.
ಹೀಗಾಗಿ ಸಂಘಟಕರು ಹೆಚ್ಚುವರಿಯಾಗಿ 5 ನಿಮಿಷಗಳ ಕಾಲಾವಕಾಶ ನೀಡಿದರು. ಈ ಅವಧಿಯಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಬಿಗಿ ಪಟ್ಟುಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ರಾಮ್, ಕುಸ್ತಿ ಇನ್ನೇನು ಮುಗಿಯಬೇಕು ಎನ್ನುವ ಹೊತ್ತಿಗೆ ಎದುರಾಳಿಯನ್ನು ಚಿತ್ ಮಾಡಿ ಸಂಭ್ರಮಿಸಿದರು.
ಬೆಳಗಾವಿಯ ಅಪ್ಪಾ ಸಾಹೇಬ್– ಸಾಂಗ್ಲಿಯ ಲೋಕೇಶ್ ವಿರುದ್ಧ, ಕೊಳಗಿಯ ಮಾರುತಿ– ಬ್ಯಾಡಗಿಯ ಮಂಜು ವಿರುದ್ಧ, ದಾವಣಗೆರೆಯ ಇರ್ಫಾನ್ (ಮೂಕ ಪೈಲ್ವಾನ್)– ತರೀಕೆರೆಯ ಪ್ರದೀಪ್ ವಿರುದ್ಧ, ಕಪ್ಪನಹಳ್ಳಿಯ ಸತೀಶ್– ಶಿವಮೊಗ್ಗದ ವಿನಯ್ ವಿರುದ್ಧ ಗೆಲುವು ಸಾಧಿಸಿದರು.
ದಾವಣಗೆರೆಯ ಮಾರುತಿ ಹಾಗೂ ಭದ್ರಾವತಿಯ ಚೆನ್ನಕಿಶೋರ ಅವರ ನಡುವೆ ನಡೆದ ಕುಸ್ತಿ ಸಮಬಲದಲ್ಲಿ ಮುಕ್ತಾಯಗೊಂಡಿತು. ಮಾಜಿ ಪೈಲ್ವಾನ್ ಕೆಂಚಪ್ಪ, ಲೋಕೇಶ್, ಬಸವರಾಜ್ ತೀರ್ಪುಗಾರರಾಗಿದ್ದರು. ಶನಿವಾರ ಮತ್ತು ಭಾನುವಾರವೂ ಕುಸ್ತಿ ಮುಂದುವರಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.