ADVERTISEMENT

ಪ್ರಚಾರ ಬಯಸದ, ನಿಸ್ವಾರ್ಥ ಕಾರ್ಯದಲ್ಲಿ ‘ಸ್ನೇಹಿತರು’ ಸಂಸ್ಥೆ

ಎಂ.ರಾಘವೇಂದ್ರ
Published 7 ಫೆಬ್ರುವರಿ 2026, 3:09 IST
Last Updated 7 ಫೆಬ್ರುವರಿ 2026, 3:09 IST
ಸಾಗರದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ‘ಸ್ನೇಹಿತರು’ ಸಂಸ್ಥೆ ಅನ್ನ ಸಂತರ್ಪಣೆ ಆಯೋಜಿಸಿದ್ದರು.
ಸಾಗರದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ‘ಸ್ನೇಹಿತರು’ ಸಂಸ್ಥೆ ಅನ್ನ ಸಂತರ್ಪಣೆ ಆಯೋಜಿಸಿದ್ದರು.   

ಸಾಗರ: ಜಾತ್ರೆ, ಉತ್ಸವಗಳ ಸಂದರ್ಭ ಯಾವುದೇ ನಿರೀಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಇಲ್ಲಿನ ‘ಸ್ನೇಹಿತರು’ ಸಂಸ್ಥೆ ಅನ್ನ ದಾಸೋಹದ ಕಾಯಕದಲ್ಲಿ ತೊಡಗಿದೆ.

35 ವರ್ಷಗಳ ಹಿಂದೆ ಅಶೋಕ ರಸ್ತೆಯಲ್ಲಿರುವ ಗೋಪಾಲ್ ಅಂಕೋಲೇಕರ್ ಅವರ ನಿವಾಸದ ಎದುರು ಕೆಲವೇ ವ್ಯಾಪಾರಸ್ಥರು ಸೇರಿ ಜಾತ್ರೆಗೆ ಬರುವ ಭಕ್ತರಿಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆದ ಈ ದಾಸೋಹ ಈಗ ವರ್ಷದಿಂದ ವರ್ಷಕ್ಕೆ ದೊಡ್ಡ ಸ್ವರೂಪ ಪಡೆದಿದೆ.

ಮಾರಿಕಾಂಬಾ ದೇವಸ್ಥಾನದ ಸಮೀಪವಿರುವ ಸಾಗರ್ ಹೋಟೆಲ್ ವೃತ್ತದ ಎದುರು ಇರುವ ನಗರಸಭೆ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ ‘ಸ್ನೇಹಿತರು’ ಸಂಸ್ಥೆಯ ಕಾರ್ಯಕರ್ತರು ಫೆ. 4ರಿಂದ ಜಾತ್ರೆಯ ಕೊನೆಯ ದಿನವಾದ 11ರವೆಗೂ ಪ್ರತಿದಿನ 5,000ದಿಂದ 6,000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ADVERTISEMENT

ಮೊಸರನ್ನದ ಜೊತೆಗೆ ಬಿಸಿಬೇಳೆ ಬಾತ್ ಅಥವಾ ಪಲಾವ್, ತುಪ್ಪದ ಅನ್ನ, ಟೊಮೆಟೊ ಬಾತ್‌ ಸೇರಿ ಯಾವುದಾದರೂ ಒಂದು ತಿನಿಸು ಅಲ್ಲದೆ ಒಂದು ಸಿಹಿ ಪದಾರ್ಥವನ್ನು ಊಟದಲ್ಲಿ ಪೂರೈಸಲಾಗುತ್ತಿದೆ. ಜೊತೆಗೆ ಕುಡಿಯುವ ನೀರನ್ನು ವಿತರಿಸಲಾಗುತ್ತಿದೆ.

‘ಸ್ನೇಹಿತರು’ ಸಂಸ್ಥೆಯವರ ವಿಶೇಷತೆ ಏನೆಂದರೆ ಉಚಿತವಾಗಿ ಊಟ ಕೊಡುವ ಬಗ್ಗೆ ಯಾರದ್ದೇ ಆಗಲಿ ಫೋಟೋ ಹಾಕಿ ಎಲ್ಲಿಯೂ ಫ್ಲೆಕ್ಸ್ ಅಳವಡಿಸಿಲ್ಲ. ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸದೆ ಜನರಿಗೆ ತೃಪ್ತಿಯಾಗುವಷ್ಟು ಊಟ ಬಡಿಸುವುದರಲ್ಲಿ  ನೆಮ್ಮದಿ ಕಾಣುತ್ತಿದ್ದಾರೆ.

‘ನಮ್ಮೂರಿನ ವ್ಯಾಪಾರಸ್ಥರು, ಉದ್ಯಮಿಗಳು ಪ್ರತಿ ಜಾತ್ರೆಯಲ್ಲಿ ದಾಸೋಹ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಹಣ ಕೊಡುವವರು ಎಲ್ಲಿಯೂ ತಮ್ಮ ಹೆಸರು ಬೆಳಕಿಗೆ ಬರಬೇಕು ಎಂದು ಬಯಸುವುದಿಲ್ಲ. ಇಲ್ಲಿ ಎಲ್ಲಾ ಪಕ್ಷ, ಜಾತಿ, ಧರ್ಮದವರ ನೆರವು ಇದೆ’ ಎನ್ನುತ್ತಾರೆ ಸ್ನೇಹಿತರು ಬಳಗದ ಬಿ.ಎಚ್. ಲಿಂಗರಾಜ್.

ಇದರ ಜೊತೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಮಾರಿಕಾಂಬಾ ದೇವಸ್ಥಾನದ ಸಮಿತಿ ವತಿಯಿಂದಲೂ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೂ ಪ್ರತಿದಿನ 5,000ದಿಂದ 6,000 ಜನರು ದಾಸೋಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.