ADVERTISEMENT

ಮಕ್ಕಳ ಯಕ್ಷಗಾನ | ಶಾಸಕರ ಅನುದಾನ ಅಗತ್ಯ: ವಿದ್ವಾನ್ ದತ್ತಮೂರ್ತಿ ಭಟ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:07 IST
Last Updated 19 ಜನವರಿ 2026, 4:07 IST
ಸಾಗರದಲ್ಲಿ ಈಚೆಗೆ ‘ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದ ಯಕ್ಷಗಾನ ತರಬೇತಿ ಕೇಂದ್ರದ ಮಕ್ಕಳು
ಸಾಗರದಲ್ಲಿ ಈಚೆಗೆ ‘ಕನಕಾಂಗಿ ಕಲ್ಯಾಣ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದ ಯಕ್ಷಗಾನ ತರಬೇತಿ ಕೇಂದ್ರದ ಮಕ್ಕಳು   

ಸಾಗರ: ಪ್ರತಿ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಕೇಂದ್ರಗಳಿಗೆ ಶಾಸಕರ ನಿಧಿಯಿಂದ ಅನುದಾನ ದೊರಕುವಂತಾಗಬೇಕು ಎಂದು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ವಿದ್ವಾನ್ ದತ್ತಮೂರ್ತಿ ಭಟ್ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರ ಈಚೆಗೆ ಏರ್ಪಡಿಸಿದ್ದ ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಭಾಗದಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳು ಶಾಸಕರ ಅನುದಾನದ ನೆರವಿನಿಂದ ನಡೆಯುತ್ತಿವೆ. ಮಲೆನಾಡು ಭಾಗದಲ್ಲೂ ಈ ನೆರವು ಸಿಗುವಂತಾಗಬೇಕು ಎಂದರು.

ADVERTISEMENT

ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಯಕ್ಷಗಾನ ಕಲಿಕೆಯಲ್ಲಿ ತೊಡಗಿಕೊಂಡರೆ ಪುರಾಣ ಪ್ರಸಂಗಗಳ ಪರಿಚಯವಾಗುವ ಜೊತೆಗೆ ಭಾಷಾ ಶುದ್ಧತೆ ಅವರಲ್ಲಿ ಮೂಡುತ್ತದೆ. ಈ ಮೂಲಕ ಉತ್ತಮ ಅಭಿರುಚಿ ಬೆಳೆದು ಅವರಲ್ಲೇ ಕೆಲವರು ದೊಡ್ಡ ಕಲಾವಿದರಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಹೊಸ ತಲೆಮಾರಿನವರು ಯಕ್ಷಗಾನ ಕಲೆಯಲ್ಲಿ ಭಾಗಿಯಾಗುವುದು ಕಡಿಮೆಯಾಗುತ್ತಿದೆ. ಹಿಂದಿನ ದಶಕಗಳಲ್ಲಿ ಇದ್ದ ಪ್ರೇಕ್ಷಕರ ಸಂಖ್ಯೆ ಯಕ್ಷಗಾನಕ್ಕೆ ಇಲ್ಲವಾಗಿದೆ. ಯಕ್ಷಗಾನದ ಗತ ವೈಭವ ಮರುಕಳಿಸಬೇಕಾದರೆ ಮಕ್ಕಳಲ್ಲಿ ಈ ಕಲೆಯ ಕುರಿತು ಹೆಚ್ಚಿನ ಆಸಕ್ತಿ ಮೂಡಿಸಬೇಕು ಎಂದು ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಹೇಳಿದರು.

ಹಿರಿಯ ವಕೀಲ ಟಿ.ಬಿ.ಮಂಜುನಾಥ ಶೆಟ್ಟಿ, ಪ್ರಮುಖರಾದ ಡಿ.ಗಣಪತಪ್ಪ, ಮಂಜಪ್ಪ, ಗುರು, ಶಿವು ಶಿರಳಗಿ, ಎಸ್.ಸಿ.ಸೈದೂರು ಇದ್ದರು. ಪ್ರತಿಭಾ ಪ್ರಸಾದ್ ಪ್ರಾರ್ಥಿಸಿದರು. ಪೂರ್ಣಿಮಾ ಸೈದೂರು ಸ್ವಾಗತಿಸಿದರು. ನಂದಿನಿ ದೇವರಾಜ್ ವಂದಿಸಿದರು. ರಾಜು ಭಾಗವತ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.