ADVERTISEMENT

ಭದ್ರಾವತಿ | ಸದಸ್ಯರಲ್ಲದವರಿಗೆ ನಿವೇಶನ ಮಾರಾಟ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 14:52 IST
Last Updated 10 ಜನವರಿ 2024, 14:52 IST
ಭದ್ರಾವತಿಯಲ್ಲಿ ಮಂಗಳವಾರ ಮೈಸೂರು ಕಾಗದ ಕಾರ್ಖಾನೆ ನೌಕರರ ಗ್ರಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಭದ್ರಾವತಿಯಲ್ಲಿ ಮಂಗಳವಾರ ಮೈಸೂರು ಕಾಗದ ಕಾರ್ಖಾನೆ ನೌಕರರ ಗ್ರಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಭದ್ರಾವತಿ: ‘ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ 2006 ರಿಂದ 14ರ ವರೆಗೆ ಸದಸ್ಯರಲ್ಲದವರಿಗೆ ನಿವೇಶನಗಳನ್ನು ಮಾರಾಟ ಮಾಡಲಾಗಿದೆ’ ಎಂದು ಸಂಘದ ಅಧ್ಯಕ್ಷ ಸಿ.ಜಿ. ಬಸವರಾಜಯ್ಯ ಆರೋಪಿಸಿದರು.

‘ಈ ಸಂಬಂಧ ವಿಚಾರಣೆ ನಡೆದು 74 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 16 ರಿಂದ 19ರ ವರೆಗೆ 4 ದಿನಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಎಂಪಿಎಂ ಬಡಾವಣೆಯಲ್ಲಿ ಒಟ್ಟು 416 ನಿವೇಶನಗಳನ್ನು ಸಿದ್ಧಗೊಳಿಸಲಾಗಿತ್ತು. ಈ ಪೈಕಿ 342 ನಿವೇಶನಗಳು ಸದಸ್ಯರಿಗೆ ಹಂಚಿಕೆಯಾಗಿವೆ. 74 ನಿವೇಶನಗಳನ್ನು ಅಂದಿನ ಸಂಘದ ಪದಾಧಿಕಾರಿಗಳು ಸದಸ್ಯರಲ್ಲದವರಿಗೆ ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ನಿವೇಶನ ಮಾರಿದ ಹಣವನ್ನು ಕೂಡ ಸಂಘಕ್ಕೆ ಜಮಾ ಮಾಡಿರಲಿಲ್ಲ. ಈ ಬಗ್ಗೆ ಸಹಾಯಕ ನಿಬಂಧಕರಿಗೆ 2018ರಲ್ಲಿ ದೂರು ನೀಡಲಾಗಿತ್ತು. ಸದಸ್ಯರಲ್ಲದವರಿಗೆ ನಿವೇಶನಗಳನ್ನು ಮಾರಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಅಲ್ಲದೆ ಸಂಘದ ಹೆಸರಿನಲ್ಲಿ ಇನ್ನೊಂದು ಬಡಾವಣೆ ಮಾಡುವುದಾಗಿ ಕೆಲವರ ಬಳಿ ಹಣ ಪಡೆದು ಸಂಘದ ಲೆಟರ್ ಹೆಡ್, ರಸೀದಿಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಗೊತ್ತಾಗಿದೆ’ ಎಂದರು.

ಆರೋಪಿಗಳಾದ ಶ್ರೀನಿವಾಸ್ ಮತ್ತು ಮಂಜುನಾಥ್ ಹಾಗೂ ಮಾಸಿಲಾಮಣಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ವಿ.ಗೋವಿಂದಪ್ಪ, ಕಾರ್ಯದರ್ಶಿ ಎಚ್.ವೀರಭದ್ರಪ್ಪ, ಎಸ್.ಆರ್. ಸೋಮಶೇಖರ್ ಪರಮಶಿವ, ಎಚ್.ಆನಂದಮೂರ್ತಿ, ಅಭಯಕುಮಾರ್, ಸಾರಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.