
ಶಿರಾಳಕೊಪ್ಪ(ಶಿಕಾರಿಪುರ): ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪೂರಕವಾಗುತ್ತದೆ ಎಂದು ಮುಖ್ಯಶಿಕ್ಷಕಿ ಮಮತಾ ಸಾಲಿ ಹೇಳಿದರು.
ಪಟ್ಟಣದ ಮೌಲಾನ ಆಜಾದ್ ಮಾದರಿ ಶಾಲೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿ ಹೊಸದೊಂದು ಪ್ರದರ್ಶನ ಮಾಡುತ್ತಾರೆ. ಅದು ಅವರಲ್ಲಿನ ಸೃಜನಶೀಲತೆಗೆ ಉತ್ತೇಜನ ನೀಡುತ್ತದೆ. ಹೊಸ ತಂತ್ರಜ್ಞಾನದ ಅರಿವು, ಹೊಸದೊಂದು ಪರಿಕಲ್ಪನೆ ಮೂಡುತ್ತದೆ ಅದು ಅವರ ಮುಂದಿನ ಶಿಕ್ಷಣಕ್ಕೂ ಸ್ಪೂರ್ತಿಯಾಗುತ್ತದೆ. ವಸ್ತು ಪ್ರದರ್ಶನ ಪ್ರತಿಯೊಂದು ಶಾಲೆಯಲ್ಲೂ ಆಯೋಜಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದರೆ ವಿಜ್ಞಾನ, ತಂತ್ರಜ್ಞಾನ ಅರಿವು ಸಿಗುತ್ತದೆ. ಅಂತಹ ಚಿಂತನೆ ಪ್ರತಿಯೊಂದು ಶಾಲೆಯಲ್ಲೂ ಅಳವಡಿಸಿಕೊಳ್ಳಬೇಕು ಎಂದರು.
ವಿಜ್ಞಾನ ಆವಿಷ್ಕಾರ, ಪ್ರಾಕೃತಿಕ ಸಂಪತ್ತಿನ ರಕ್ಷಣೆ, ಐತಿಹಾಸಿಕ ಸ್ಥಳ, ಬಣ್ಣಗಳ ವರ್ಗೀಕರಣ, ಬೆಳಕು, ಗಾಳಿ ಶಕ್ತಿ ಬಳಕೆ, ನೀರಿನ ಮಿತ ಬಳಕೆ, ಶಕ್ತಿ, ಪ್ರಾಣಿ, ಪಕ್ಷಿ ಸಂರಕ್ಷಣೆಗೆ ಹೊಸ ತಂತ್ರಜ್ಞಾನ, ಯಂತ್ರಗಳ ಬಳಕೆ ಸೇರಿ ಹಲವು ಬಗೆಯ ವಸ್ತು ಪ್ರದರ್ಶನ ವಿದ್ಯಾರ್ಥಿಗಳು, ಶಿಕ್ಷಕರ ಸೃಜನಶೀಲತೆಗೆ ಸಾಕ್ಷಿಯಾಗಿದೆ ಎಂದು ಮುರಾರ್ಜಿ ಶಾಲೆ ಪ್ರಾಂಶುಪಾಲ ಕರಿಬಸಪ್ಪ ಹೇಳಿದರು.
ಮುಖ್ಯಶಿಕ್ಷಕ ರಿಯಾಜ್ ಅಹ್ಮದ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವಿಜಯಕುಮಾರ್, ಪ್ರಮುಖರಾದ ಮೊಹಮ್ಮದ್ ಅಯೂಬ್, ಝುಲ್ಪೀಕ್ಕಾರ್ ಅಲಿ, ಜಿಯಾವುಲ್ಲಾ ಶಾಲೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.