ADVERTISEMENT

ವೈಜ್ಞಾನಿಕ ಬಂದೂಕು ಪರವಾನಗಿಗೆ ಚಿಂತನೆ: ಆರಗ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 4:37 IST
Last Updated 5 ಏಪ್ರಿಲ್ 2022, 4:37 IST
ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬಂದೂಕು ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಗೃಹಸಚಿವ ಆರಗ ಜ್ಞಾನೇಂದ್ರ ಭಾನುವಾರ ಉದ್ಘಾಟಿಸಿದರು.
ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬಂದೂಕು ತರಬೇತಿ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಗೃಹಸಚಿವ ಆರಗ ಜ್ಞಾನೇಂದ್ರ ಭಾನುವಾರ ಉದ್ಘಾಟಿಸಿದರು.   

ತೀರ್ಥಹಳ್ಳಿ: ‘ಮಲೆನಾಡಿನ ಕಾಡಿನಂಚಿನ ಮನೆ, ಹೊಲಗಳ ರಕ್ಷಣೆಗೆ ಬಂದೂಕು ಅಗತ್ಯವಿದೆ. ಅರಣ್ಯ ಪ್ರದೇಶದಿಂದ 8 ಕಿಲೋ ಮೀಟರ್‌ ಬಫರ್‌ ಝೋನ್‌ ನಿಯಮ ಅವೈಜ್ಞಾನಿಕ. ನಿಯಮ ಸಡಿಲಿಕೆಯಿಂದ ಆಗುವ ಅನಾಹುತ, ಅಪಾಯಗಳನ್ನು ಯೋಚಿಸಿ ಬಂದೂಕು ಪರವಾನಿಗೆ ನಿಯಮ ಸಡಿಲಗೊಳಿಸಲು ಚಿಂತನೆ ನಡೆಸಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪೊಲೀಸ್‌ ಇಲಾಖೆ ಮತ್ತು ತೀರ್ಥಹಳ್ಳಿ ಸೌಹಾರ್ದ ಸಹಕಾರ ನಿಯಮಿತ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 10 ದಿನಗಳ ಬಂದೂಕು ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

‘ಶಸ್ತ್ರಗಳನ್ನು ಇಟ್ಟುಕೊಳ್ಳುವುದು ಅಪಾಯಕಾರಿ. ಸಮಯದ ಪರಿಜ್ಞಾನ, ಬಳಕೆ ತಿಳಿಯದವರು ಬಂದೂಕು ಇಟ್ಟುಕೊಳ್ಳಬಾರದು. ನಿಯಮಗಳ ಅನ್ವಯ ಶಿಕಾರಿ ನಿಷೇಧಿಸಲಾಗಿದೆ. ರೈತರ ಬೇಡಿಕೆಯಂತೆ ಬಂದೂಕು ಪರವಾನಿಗೆ ಪಡೆಯುವ ನಿಯಮಾವಳಿ ಸರಳೀಕರಣಕ್ಕೆ ಸಿದ್ದವಿದ್ದೇವೆ. ಅನಗತ್ಯ ನಿಯಮ ರದ್ದುಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್‌ ಮಾತನಾಡಿ, ‘ತರಬೇತಿ ಪಡೆದವರು ಪರವಾನಿಗೆ ನಿಯಮ ಪಾಲಿಸಬೇಕು. ಸೂಕ್ತ ದಾಖಲೆ ಸಲ್ಲಿಸಿದರೆ ಮಾತ್ರ ಪರವಾನಗಿ ನೀಡಲಾಗುತ್ತದೆ ಎಂದು ಹೇಳಿದರು.

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ನಾಗರಾಜ ಶೆಟ್ಟಿ, ಸಮಾಜ ಸೇವಕ ಕುರುವಳ್ಳಿ ಪ್ರಮೋದ್‌ ಪೂಜಾರಿ, ಮುಖ್ಯಮಂತ್ರಿ ಪದಕ ಪುರಸ್ಕೃತ ಹೆಡ್‌ ಕಾನ್ಸ್‌ ಟಬಲ್‌ ಸುಧಾಕರ್‌, ಮಾನವೀಯ ಸೇವೆ ಸಲ್ಲಿಸಿದ ವಸಂತ್‌ ಅವರನ್ನು ಸನ್ಮಾನಿಸಲಾಯಿತು. 553 ಜನರು ಬಂದೂಕು ತರಬೇತಿ ಪ್ರಮಾಣ ಪತ್ರ ಪಡೆದರು.

ತೀರ್ಥಹಳ್ಳಿ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ರಕ್ಷಿತ್‌ ಮೇಗರವಳ್ಳಿ ಮಾತನಾಡಿದರು. ಆಯ್ದ ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಡಿವೈಎಸ್‌ಪಿ ಶಾಂತವೀರ್‌, ಡಿಆರ್‌ ವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.