ADVERTISEMENT

ಭಯಪಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಸದ ಬಿ.ವೈ.ರಾಘವೇಂದ್ರ ಅಭಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 4:34 IST
Last Updated 19 ಅಕ್ಟೋಬರ್ 2022, 4:34 IST
ಶಿವಮೊಗ್ಗದಲ್ಲಿ ಮಂಗಳವಾರ ಸಂಸದ ಬಿ.ವೈ.ರಾಘವೇಂದ್ರ ಶರಾವತಿ ಸಂತ್ರಸ್ತರ ಅಳಲು ಆಲಿಸಿದರು
ಶಿವಮೊಗ್ಗದಲ್ಲಿ ಮಂಗಳವಾರ ಸಂಸದ ಬಿ.ವೈ.ರಾಘವೇಂದ್ರ ಶರಾವತಿ ಸಂತ್ರಸ್ತರ ಅಳಲು ಆಲಿಸಿದರು   

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಶೀಘ್ರವೇ ಬಗೆಹರಿಸಲಾಗುವುದು. ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಸಂತ್ರಸ್ತರಿಗೆ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಸಂಸದರು, ಸಂತ್ರಸ್ತರಿಗೆ ಸಾಂತ್ವನ ಹೇಳಿ ಯಾವುದೇ ಕಾರಣಕ್ಕೂ ಸರ್ಕಾರ ನಿಮ್ಮ ಕೈಬಿಡುವುದಿಲ್ಲ ಎಂದು ತಿಳಿಸಿದರು.

‘ನ್ಯಾಯಾಲಯ ಶರಾವತಿ ಸಂತ್ರಸ್ತರ ಜಮೀನಿನ ಡಿನೋಟಿಫಿಕೇಷನ್‌ಗೆ ಸಂಬಂಧಿಸಿ ಗಿರೀಶ್ ಆಚಾರ್ ಎಂಬುವವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಅಧಿಕಾರಿಗಳ ತಪ್ಪಿನಿಂದ ನ್ಯಾಯಾಲಯದಲ್ಲಿ ನಮಗೆ ಹಿನ್ನಡೆ ಆಗಿದೆ. ಇದನ್ನು ಸರಿಪಡಿಸಲಾಗುವುದು’ ಎಂದರು.

ADVERTISEMENT

‘ಶರಾವತಿ ಭಾಗದ ರೈತರು ತಮ್ಮ ಜಮೀನುಗಳನ್ನು ನೀಡಿ ಕತ್ತಲೆಯಲ್ಲಿರುವುದು ನಿಜ. ಇವರಿಗೆ ಭೂಮಿ ಹಕ್ಕನ್ನು ಆಗಿನ ಸರ್ಕಾರ ಕೊಡಬೇಕಿತ್ತು. ಈ ಸಮಸ್ಯೆ ದಶಕಗಳಿಂದ ಇದೆ. 1980ಕ್ಕೆ ಮುನ್ನವೇ ಅರಣ್ಯ ಸಂರಕ್ಷಣೆ ಕಾಯ್ದೆಯಡಿಯಲ್ಲಿಯೇ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಸರ್ಕಾರ ಸಂತ್ರಸ್ತರ ಪರವಾಗಿ ತೀರ್ಮಾನ ತೆಗೆದುಕೊಂಡರೂ ಆ ಬಗ್ಗೆ ಗೆಜೆಟ್ ಪ್ರಕಟಣೆ ಹೊರಡಿಸಲಿಲ್ಲ. ಪುನಃ 2016ರಲ್ಲಿ ಡಿನೋಟಿಫೈ ಮಾಡಿತ್ತು. ಆದರೆ, ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಇರುವುದರಿಂದ ಈಗ ಡಿನೋಟಿಫೀಕೇಷನ್ ರದ್ದಾಗಿದೆ’ ಎಂದರು.

‘ಈಗಿನ ಅಧಿಕಾರಿಗಳ ಹಾಗೂ ಆಗಿನ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈ ಆದೇಶ ಬಂದಿದ್ದು, ಇದಕ್ಕಾಗಿ ರೈತರು ಭಯಪಡುವ ಅಗತ್ಯವಿಲ್ಲ. ನಾಳೆ ಬೆಳಿಗ್ಗೆಯೇ ನಾನು ಸಂತ್ರಸ್ತರ ಪರವಾಗಿ ದೆಹಲಿಯಲ್ಲಿ ಕೃಷಿ ಮತ್ತು ಅರಣ್ಯ ಸಚಿವರ ಜೊತೆ ಮಾತನಾಡುತ್ತೇನೆ. ಕೇಂದ್ರದ ಒಪ್ಪಿಗೆ ಪಡೆದೇ ಸಂತ್ರಸ್ತರ ಜಾಗ ಉಳಿಸಿಕೊಡುತ್ತೇನೆ. ಸಾಗುವಳಿ ಮಾಡುತ್ತಿರುವ ಸಂತ್ರಸ್ತ ರೈತರ ಜಮೀನನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ತಪ್ಪಾಗಿದೆ ನಿಜ, ಅದನ್ನು ಸರಿಪಡಿಸಿಕೊಡುತ್ತೇನೆ. ಯಾರೂ ಧೃತಿಗೇಡಬೇಡಿ’
ಎಂದರು.

ಈ ಸಂದರ್ಭದಲ್ಲಿ ಸಂತ್ರಸ್ತರ ಪರವಾಗಿ ಮಾತನಾಡಿದ ರೈತರಾದ ಸುಬ್ಬಣ್ಣ, ಸುಧಾಕರ್ ಮತ್ತು ಕೃಷ್ಣಮೂರ್ತಿ, ‘ನಮ್ಮ ಸಮಸ್ಯೆ ಬಗೆಹರಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಮುಳುಗಡೆ ಸಂತ್ರಸ್ತರನ್ನು ಕಣ್ಣೀರು ಹಾಕಿಸಬೇಡಿ. ರಾಜಕಾರಣಿಗಳು ಕೇವಲ ಭರವಸೆ ನೀಡಬಾರದು. ಎಲ್ಲ ಪಕ್ಷದವರು ನಮಗೆ ಸಹಕಾರ ನೀಡಬೇಕು. ನಾವು ಜಮೀನು ಕಳೆದುಕೊಂಡಿದ್ದೇವೆ. ಕತ್ತಲಲ್ಲಿದ್ದು ನಾಡಿಗೆ ಬೆಳಕು ನೀಡಿದ್ದೇವೆ. ಅವತ್ತೇ ನಮಗೆ ನ್ಯಾಯ ದೊರಕಿಸಿಕೊಡಬೇಕಿತ್ತು. ಆದರೆ, ಆಗಿಲ್ಲ. ಇವತ್ತಾದರೂ ನಮಗೆ ನ್ಯಾಯ ಕೊಡಿ’ ಎಂದು ಮನವಿ ಮಾಡಿದರು.

ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.