
'ಶರಾವತಿ ಉಳಿಸಿ': ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗಮನಸೆಳೆದ ಪೋಸ್ಟರ್
ಕಾರವಾರ: ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧದ ಧ್ವನಿ ಹೆಚ್ಚುತ್ತಿದ್ದು, ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿಯೂ 'ಶರಾವತಿ ಉಳಿಸಿ' ಪೋಸ್ಟರ್ ಗಮನಸೆಳೆಯಿತು.
ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್'ನ ಸೂಪರ್-4 ವಿಭಾಗದ ಪಂದ್ಯ ನಡೆಯುತ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮೂವರು ಯುವಕರು 'ಶರಾವತಿ ಉಳಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ' ಎಂಬ ಬರಹವಿದ್ದ ಪೋಸ್ಟರ್ ಪ್ರದರ್ಶಿಸಿದರು.
ಯುವಕರು ಪೋಸ್ಟರ್ ಪ್ರದರ್ಶಿಸಿದ ಚಿತ್ರ ಕ್ರಿಕೆಟ್ ಪಂದ್ಯಾವಳಿಯ ನೇರಪ್ರಸಾರದ ವೇಳೆ ಕಂಡುಬಂತು. ಈ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮೂವರು ಯುವಕರು ಯಾರೆಂಬುದು ಗೊತ್ತಾಗಿಲ್ಲ.
'ಶರಾವತಿ ಉಳಿಸಿ ಅಭಿಯಾನಕ್ಕೆ ಬಲ ಬರುತ್ತಿದೆ. ಯುವಜನತೆ ಜಾಗೃತರಾಗಿದ್ದು ಯೋಜನೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಳೆ ಯೋಜನೆ ವಿರುದ್ಧ ಪೋಸ್ಟರ್ ಪ್ರದರ್ಶಿಸಿರುವುದು ಹೋರಾಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ' ಎಂದು ಯೋಜನೆ ವಿರುದ್ಧ ಹೋರಾಟ ನಡೆಸುತ್ತಿರುವ ಶರಾವತಿ ಉಳಿಸಿ ಹೋರಾಟ ಸಮಿತಿ, ಹೊನ್ನಾವರ ಫೌಂಡೇಶನ್ ಪ್ರಮುಖರು ತಿಳಿಸಿದ್ದಾರೆ.
ಶೀಘ್ರದಲ್ಲೇ 'ಎಕ್ಸ್' ಅಭಿಯಾನ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯಲು 'ಎಕ್ಸ್' ಅಭಿಯಾನ ಆರಂಭಕ್ಕೆ ಉತ್ತರ ಕನ್ನಡ, ಶಿವಮೊಗ್ಗ ಭಾಗದ ಯುವಕರು ಮುಂದಾಗಿದ್ದಾರೆ.
ಸ್ಟಾಪ್ ಶರಾವತಿ ಪಂಪ್ಡ್ ಸ್ಟೋರೇಜ್ ಹ್ಯಾಶ್ ಟ್ಯಾಗ್ ಬಳಸಿ ಸದ್ಯದಲ್ಲೇ ಎಕ್ಸ್ ಅಭಿಯಾನ ನಡೆಯಲಿದೆ. ಇದಕ್ಕೆ ಬೆಂಬಲಿಸು ಎಂಬ ಬರಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.