ADVERTISEMENT

ಕಮಿಷನ್ ಆಸೆಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಹಾಲಪ್ಪ ಹರತಾಳು ಆರೋಪ

ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಲಪ್ಪ ಹರತಾಳು ಆರೋಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 7:22 IST
Last Updated 24 ಆಗಸ್ಟ್ 2025, 7:22 IST
ಎಚ್.ಹಾಲಪ್ಪ ಹರತಾಳು
ಎಚ್.ಹಾಲಪ್ಪ ಹರತಾಳು   

ಸಾಗರ: ‘ವೈಜ್ಞಾನಿಕವಾಗಿ ಸಾಧುವಲ್ಲ, ಪರಿಸರಕ್ಕೆ ಮಾರಕ ಎಂಬ ವಿಷಯ ಗೊತ್ತಿದ್ದರೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ದೊಡ್ಡ ಮೊತ್ತದ ಕಮಿಷನ್ ಹೊಡೆಯುವ ಆಸೆಗೆ ರಾಜ್ಯ ಸರ್ಕಾರ ಉತ್ಸಾಹ ತೋರುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಆರೋಪಿಸಿದ್ದಾರೆ.

‘ಈ ಯೋಜನೆ ಅನುಷ್ಠಾನದ ಹಿಂದೆ ಮಣ್ಣು, ಮರಳು, ಕಂಟ್ರಾಕ್ಟ್ ಲಾಬಿ ಅಡಗಿದೆ. ಈಗ ₹ 9,000 ಕೋಟಿ ಯೋಜನೆಯ ವೆಚ್ಚ ಎನ್ನಲಾಗುತ್ತಿದೆ. ಮುಂದೆ ಇದು ₹ 15,000 ಕೋಟಿಗೆ ತಲುಪಬಹುದು. ಗುತ್ತಿಗೆ ಹಿಡಿದ ಕಂಪೆನಿ ಮುಂಗಡವಾಗಿ ₹ 800 ಕೋಟಿ ಪಾವತಿಸಿದೆ. ಇದೊಂದು ದುಡ್ಡು ಹೊಡೆಯುವ ಯೋಜನೆ ಎಂಬುದು ಸ್ಪಷ್ಟ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.

‘ಪ್ರಸ್ತಾವಿತ ಯೋಜನೆಯಂತೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೀರನ್ನು ಮೇಲಕ್ಕೆತ್ತಲು 2500 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆಯಿದೆ. ಯೋಜನೆ ಪ್ರಕಾರ ಉತ್ಪಾದನೆಯಾಗುವುದು ಕೇವಲ 2,000 ಮೆಗಾವ್ಯಾಟ್. ಆದಾಗ್ಯೂ ವಿದ್ಯುತ್ ಉತ್ಪಾದನೆ ಕೊರತೆ ನಿವಾರಿಸುವ ನೆಪ ಹೇಳಿ ಯೋಜನೆಯನ್ನು ಸಮರ್ಥಿಸುತ್ತಿರುವವರಿಗೆ ತಲೆ ಇಲ್ಲವೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಹಿರೇಭಾಸ್ಕರ, ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದಿಂದ ಈ ಭಾಗದ ಜನ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. 65 ವರ್ಷಗಳ ನಂತರವೂ ಸಂತ್ರಸ್ತರಿಗೆ ಭೂಮಿಯ ಹಕ್ಕು ದೊರಕಿಲ್ಲ. ವಿದ್ಯುತ್ ಸಾಗಾಣಿಕೆ ಮಾರ್ಗ ಸೇರಿದಂತೆ ಯೋಜನೆಯಿಂದ 10,000 ಎಕರೆ ಪ್ರದೇಶ ಭೂ ಸ್ವಾಧೀನ ಪ್ರಕ್ರಿಯೆಗೆ ಒಳಗಾಗಬೇಕಿದೆ. ನೂರಾರು ರೈತರು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ಸರ್ಕಾರ ಈ ವಿಷಯವನ್ನು ಮುಚ್ಚಿಟ್ಟು ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ’ ಎಂದು ದೂರಿದರು.

‘ಯೋಜನೆ ಅನುಷ್ಠಾನಗೊಂಡರೆ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತದೆ. ಹೆದ್ದಾರಿ ವಿಸ್ತರಣೆಗಾಗಿ ಮರ ಕಡಿಯುತ್ತಿದ್ದು, ಇಂತಹ ಯೋಜನೆಗೂ ಮರ ಕಡಿಯುವುದು ಅನಿವಾರ್ಯ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ನೀಡಿರುವ ಹೇಳಿಕೆ ಅವಿವೇಕತನದಿಂದ ಕೂಡಿದೆ. ರಸ್ತೆ ವಿಸ್ತರಣೆಗೆ ಬೇರೆ ಮಾರ್ಗವೇ ಇಲ್ಲ, ಆದರೆ ವಿದ್ಯುತ್ ಉತ್ಪಾದನೆಗೆ ಹಲವು ಮಾರ್ಗಗಳಿವೆ’ ಎಂಬ ಸರಳ ಸತ್ಯ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದರು.

‘ಯೋಜನೆ ವಿರೋಧಿಸಿ ವಿವಿಧ ಮಠಾಧೀಶರು, ಧರ್ಮಗುರುಗಳ ನೇತೃತ್ವದಲ್ಲಿ ಶರಾವತಿ ಕಣಿವೆ ಉಳಿಸಿ ಹೋರಾಟ ಸಮಿತಿ ಆ. 25ರಂದು ಸಾಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆಗೆ ನನ್ನ ಬೆಂಬಲವಿದೆ. ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳು’ ಎಂದು ತಿಳಿಸಿದರು.

‘ಮರವನ್ನು ಕಡಿಯದೆ, ರೈತರನ್ನು ಒಕ್ಕಲೆಬ್ಬಿಸದೆ ಪರಿಸರ ಸ್ನೇಹಿಯಾದ ವಿದ್ಯುತ್ ಉತ್ಪಾದನೆ ಯೋಜನೆಗಳನ್ನು ಜಾರಿಗೊಳಿಸುವತ್ತ ಸರ್ಕಾರ ಗಮನ ಹರಿಸಬೇಕು. ಪಾವಗಡದಲ್ಲಿನ ಸೌರಶಕ್ತಿ ವಿದ್ಯುತ್ ಉತ್ಪಾದನೆ ಘಟಕ ಒಂದು ಉತ್ತಮ ಮಾದರಿಯಾಗಿದೆ. ಇದೇ ಸ್ವರೂಪದ ವಿದ್ಯುತ್ ಉತ್ಪಾದನೆ ಯೋಜನೆಗಳನ್ನು ಮಲೆನಾಡಿನಲ್ಲೂ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿಯ ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ್ ಪ್ರಸಾದ್, ಮೈತ್ರಿ ಪಾಟೀಲ್, ರಮೇಶ್ ಎಚ್.ಎಸ್. ಸುಜಯ್ ವಾಮನ್ ಶೆಣೈ, ಗೋಪಾಲ್ ಬೆಳಲಮಕ್ಕಿ, ಸತೀಶ್ ಕೆ. ಬಿ.ಟಿ.ರವೀಂದ್ರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.