ಸಾಗರ: ‘ಮುಂದಿನ ಪೀಳಿಗೆಗಾಗಿ ಪರಿಸರವನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆಯಾಗಿದ್ದು, ಪರಿಸರಕ್ಕೆ ಮಾರಕವಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನನ್ನ ವಿರೋಧವಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ರೈತ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.
ಯೋಜನೆ ವಿರೋಧಿಸಿ ಪಕ್ಷಾತೀತ ಹೋರಾಟ ನಡೆಯುತ್ತಿರುವುದು ಸ್ವಾಗತಾರ್ಹ. ವಿದ್ಯುತ್ ಯೋಜನೆಗೆ ಪ್ರಸ್ತಾವನೆ ಕಳುಹಿಸಿದಾಗ ಬೇರೆ ಬೇರೆ ಕಾರಣಗಳಿಗಾಗಿ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡುತ್ತದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪಶ್ಚಿಮಘಟ್ಟ, ಶರಾವತಿ ಕಣಿವೆಯ ಜೀವವೈವಿಧ್ಯಕ್ಕೆ ಉಂಟಾಗುವ ಹಾನಿಯ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.
ಪ್ರಸ್ತಾವಿತ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿ ತಟದ ನಿವಾಸಿಗಳಿಗೂ ತೊಂದರೆಯಾಗುತ್ತದೆ. ಈ ಕಾರಣ ಕೆನರಾ ಕ್ಷೇತ್ರದ ಸಂಸದರೊಂದಿಗೆ ಚರ್ಚಿಸಿ ಯೋಜನೆಯ ಸಾಧಕ ಬಾಧಕಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ರಮೇಶ್ ಕೆಳದಿ, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಸುವರ್ಣ ಟೀಕಪ್ಪ ಇದ್ದರು.
ಧರಣಿಗೆ ಕೆಆರ್‌ಎಸ್ ಪಕ್ಷದ ಬೆಂಬಲ
‘ರೈತ ಸಂಘ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ’ ಎಂದು ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ತಿಳಿಸಿದ್ದಾರೆ. ಭಾನುವಾರ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಗುತ್ತಿಗೆದಾರರು ಕೆಲವು ರಾಜಕಾರಣಿಗಳ ಲಾಭಕ್ಕಾಗಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಜನರ ವಿರೋಧ ಗಮನಿಸಿ ಸರ್ಕಾರ ಇದನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.