
ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಅವೈಜ್ಞಾನಿಕ ಯೋಜನೆ. ಅದು ಪರಿಸರ ವಿರೋಧಿ, ಜನ ವಿರೋಧಿ ಆಗಿದೆ ಎಂದು ಆರೋಪಿಸಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳು ಸೇರಿ ನಗರದ ಸೀನಪ್ಪಶೆಟ್ಟಿ ವೃತ್ತದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.
ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ ಎಂದರು.
₹10,700 ಕೋಟಿ ಲೂಟಿ ಮಾಡುವ ಸಂಚು ಈ ಯೋಜನೆಯಲ್ಲಿ ಇದೆ. ಮುಂದಿನ ಪೀಳಿಗೆಗೆ ಸಮೃದ್ಧ ನೀರನ್ನು ಕೊಂಡೊಯ್ಯುವ ಉದ್ದೇಶ ಈ ಹೋರಾಟದ್ದಾಗಿದೆ. ಸಾರ್ವಜನಿಕರ ಬೆಂಬಲದೊಂದಿಗೆ ಶತಾಯ-ಗತಾಯ ಈ ಯೋಜನೆಯನ್ನು ನಿಲ್ಲಿಸುತ್ತೇವೆ ಎಂದು ಹೇಳಿದರು.
ಪರಿಸರ ಹೋರಾಟಗಾರ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ಅಧಿಕಾರಿ ಪ್ರಣೀತಾಪೌಲ್, ಅಳಿವಿನಂಚಿನಲ್ಲಿರುವ ಸಿಂಗಳೀಕ, ಮಂಗಟ್ಟೆ ಪಕ್ಷಿಗಳು ಪಶ್ವಿಮ ಘಟ್ಟದಲ್ಲಿವೆ. ಇಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯಗಳ ಜಾರಿಗೊಳಿಸಬಾರದು ಎಂಬ ವರದಿ ನೀಡಿದ್ದಾರೆ. ಆದರೆ ರಾಜ್ಯದ ಅರಣ್ಯಾಧಿಕಾರಿ ಸೆಂಥಿಲ್‌ಕುಮಾರ್ ಅಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಹಾನಿ ಆಗುವುದಿಲ್ಲ. ಯೋಜನೆ ಜಾರಿಗೊಳಿಸಬಹುದು ಎಂದು ವರದಿ ನೀಡಿದ್ದಾರೆ. ಇದು ದುರಂತದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಸರ ತಜ್ಞ ಡಾ.ಎಲ್.ಕೆ. ಶ್ರೀಪತಿ ಮಾತನಾಡಿ, ಜಲಚರ, ಕೃಷಿಭೂಮಿ, ಮತ್ಸೋದ್ಯಮ, ಸಸ್ಯ ಸಂಪತ್ತಿನ ಹಾನಿಗಳ ಬಗ್ಗೆ ಕೆಪಿಸಿಎಲ್ ನೀಡುವ ಪರಿಹಾರ ಏನು ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕೆಪಿಸಿಎಲ್‌ಗೆ ಪತ್ರಬರೆದು ಆಗ್ರಹಿಸಿದರು. ಇಂದಿನವರೆಗೂ ಯಾವುದೇ ಲಿಖಿತ ಉತ್ತರ ಬಂದಿಲ್ಲ. ಇದು ಕೆಪಿಸಿಎಲ್‌ನ ಜನವಿರೋಧಿ, ಪರಿಸರ ವಿರೋಧಿ ಧೋರಣೆಯ ತೋರಿಸುತ್ತದೆ ಎಂದು ಕಿರಿಕಾರಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಎ.ಎಸ್.ಪದ್ಮನಾಭ ಭಟ್, ಎಂ.ಶಂಕರ್, ಪರಶುರಾಮೇಗೌಡ, ರವಿ, ರಮೇಶ್‌ಬಾಬು, ಈ. ವಿಶ್ವಾಸ್, ಶ್ರೀಕಾಂತ್, ಬಸವರಾಜು, ಮಹಾಲಿಂಗಯ್ಯಶಾಸ್ತ್ರಿ, ಜಿ.ವಿಜಯಕುಮಾರ್, ಕವಿತಾ, ಡಾ.ಶೇಖರ್ ಗೌಳೇರ್, ಮೋಹನ್ ಜಾಧವ್, ಜನಾರ್ಧನ್ ಪೈ, ಮಧು, ರವಿ ಇದ್ದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಇನ್ನೂ ಅನುಮತಿ ಕೊಟ್ಟಿಲ್ಲ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ಆದರೆ ಇಂಧನ ಸಚಿವ ಕೆ.ಜೆ.ಜಾರ್ಜ್ ಯೋಜನೆ ಜಾರಿಗೆ ಇನ್ನಿಲ್ಲದ ಉತ್ಸಾಹ ತೋರುತ್ತಿದ್ದಾರೆ. ಯೋಜನೆ ಸ್ಥಗಿತಗೊಳಿಸುವವರೆಗೂ ಹೋರಾಟ ನಿಲ್ಲದು.-ಕೆ.ಈ.ಕಾಂತೇಶ್ ರಾಷ್ಟ್ರಭಕ್ತರ ಬಳಗದ ಮುಖಂಡ
ಯೋಜನೆಯಡಿ ಶರಾವತಿ ಕಣಿವೆಯಲ್ಲಿ 130 ಅಡಿ ವ್ಯಾಸದ ಸುರಂಗ ಕೊರೆಯಲಾಗುವುದು. ಅದಕ್ಕೆ 18 ಸಾವಿರ ಟನ್ ಜಿಲೆಟಿನ್ ಸ್ಪೋಟಕ ಬಳಸಲಾಗುತ್ತಿದೆ. ಜಿಲೆಟಿನ್ ಸ್ಪೋಟಕಕ್ಕೆ ಹೇಗೆ ಅನುಮತಿ ನೀಡುತ್ತದೆ? ಸರ್ಕಾರ ನಮ್ಮ ಜೇವ ತೆಗೆದು ಯೋಜನೆ ಜಾರಿಗೊಳಿಸಲಿ.ಮಾರುತಿ ಗುರೂಜಿ ಬಂಗಾರಮಕ್ಕಿ ಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.