
ಶಿಕಾರಿಪುರ: ತಾಲೂಕಿನಲ್ಲಿರುವ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಶಾಸಕ ಬಿ.ವೈ. ವಿಜಯೇಂದ್ರ ಅರಣ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಹೊಸದಾಗಿ ಅರಣ್ಯ ಕಡಿದು ಸಾಗುವಳಿ ಮಾಡಲು ಅವಕಾಶ ನೀಡಬಾರದು. ಆದರೆ, ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಬಾರದು. ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯ ಬೇಗ ಪೂರ್ಣಗೊಳಿಸಬೇಕು ಎಂದರು.
ಗ್ಯಾರಂಟಿ ಯೋಜನೆ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ. ನಾಗರಾಜಗೌಡ ಮಾತನಾಡಿ, ‘ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯರು ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆಸ್ಪತ್ರೆ ಆಡಳಿತಾಧಿಕಾರಿ ರೋಗಿಗಳಿಗೆ ಚಿಕಿತ್ಸೆ ನೀಡದೇ ವಾಗ್ವಾದ ಮಾಡುತ್ತಿದ್ದಾರೆ. ನನ್ನ ಜೇಬಲ್ಲಿ ರಾಜೀನಾಮೆ ಇದೆ ಎನ್ನುವ ಮೂಲಕ ಉದ್ಧಟತನ ಮೆರೆಯುತ್ತಿದ್ದು, ಅವರ ವಿರುದ್ದ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಉದ್ಧಟತನ ತೋರುವವರ ವಿರುದ್ಧ ನೋಟಿಸ್ ನೀಡಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ನವೀದ್ ಖಾನ್ಗೆ ಸೂಚಿಸಿದರು.
ಕೆಡಿಪಿ ಸದಸ್ಯ ಮಾರವಳ್ಳಿ ಉಮೇಶ್ ಮಾತನಾಡಿ, ‘ಸಮಾಜ ಕಲ್ಯಾಣ ಇಲಾಖೆ ಮತ್ತು ಅರಣ್ಯ ಹಕ್ಕು ಸಮಿತಿಯಲ್ಲಿ 2007 ರೈತರ ಅರ್ಜಿಗಳು ಇತ್ಯರ್ಥಗೊಳ್ಳದೆ ಬಾಕಿ ಇವೆ. ಈ ನಡುವೆ ಅರಣ್ಯಾಧಿಕಾರಿಗಳು ರೈತರ ಸಾಗುವಳಿ ಭೂಮಿ ತೆರವಿಗೆ ಮುಂದಾಗಿದ್ದು ಅದನ್ನು ನಿಲ್ಲಿಸಬೇಕು’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಸ್. ರವೀಂದ್ರ ಮಾತನಾಡಿ, ‘ಹಲವು ಸರ್ಕಾರಿ ಅಧಿಕಾರಿಗಳು ಶಿವಮೊಗ್ಗದಲ್ಲಿ ವಾಸವಿದ್ದು, ಸರ್ಕಾರಿ ವಾಹನ ಶಿವಮೊಗ್ಗ– ಶಿಕಾರಿಪುರಕ್ಕೆ ಓಡಾಡಲು ಡಿಸೇಲ್ ವೆಚ್ಚ ಹೆಚ್ಚಾಗುತ್ತಿದೆ. ಅವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು’ ಎಂದರು.
ಕೆಡಿಪಿ ಸದಸ್ಯ ರಾಘವೇಂದ್ರನಾಯ್ಕ ಮಾತನಾಡಿ, ‘ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧ, ಮಾತ್ರೆ ದೊರೆಯುತ್ತಿಲ್ಲ. ಖಾಸಗಿ ಮೆಡಿಕಲ್‌ಗೆ ಚೀಟಿ ಬರೆಯುತ್ತಿದ್ದಾರೆ’ ಎಂದು ಆರೋಪಿಸಿದರು.
‘ಆಸ್ಪತ್ರೆಯಲ್ಲಿ ಔಷಧ ದೊರೆಯುವಂತೆ ಎಚ್ಚರಿಕೆ ವಹಿಸಬೇಕು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ವಿಳಂಬ ಆಗುತ್ತಿರುವ ದೂರು ಬಂದಿದ್ದು, ಮಾನವೀಯತೆ ದೃಷ್ಟಿಯಲ್ಲಿ ಸಮಸ್ಯೆ ಪರಿಹರಿಸಬೇಕು’ ಎಂದು ಆಡಳಿತಾಧಿಕಾರಿ ಅರುಣ್‌ಕುಮಾರ್‌ಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಇಒ ನಾಗರಾಜ್, ತಹಶೀಲ್ದಾರ್ ಮಂಜುಳಾ ಎಸ್. ಭಜಂತ್ರಿ, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಬಾಳೆಕಾಯಿ, ಕೆಡಿಪಿ ಸದಸ್ಯರಾದ ವೀರನಗೌಡ, ಮಂಜಪ್ಪ, ಪುಷ್ಪಾ, ಅಜೀಜ್ ಖಾನ್, ಲೋಹಿತ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಂಬೂರು ಶಿವಶಂಕರಪ್ಪ, ಡಿ.ಎಲ್. ಬಸವರಾಜ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.