ಶಿಕಾರಿಪುರ: ರುದ್ರಭೂಮಿಯಲ್ಲಿ ಮೃತದೇಹದ ಅಂತ್ಯಸಂಸ್ಕಾರಕ್ಕೆ ಉರುವಲು ಸೌದೆ ದೊರೆಯದೇ ಇರುವುದರಿಂದ ಮೃತರ ಕುಟುಂಬ ವರ್ಗದವರು ಪರದಾಡುವಂತಾಗಿದೆ.
ಪಟ್ಟಣದಲ್ಲಿ ವಿವಿಧ ಸಮಾಜದವರು ಮೃತದೇಹವನ್ನು ಸೌದೆಯಲ್ಲಿ ಸುಡುವ ಪದ್ಧತಿ ಅನುಸರಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಟ್ಟಿಗೆಯ ಕೊರತೆಯುಂಟಾಗಿದೆ. ಮೊದಲೆಲ್ಲಾ ರೈತರು ಕಾಡಿನಿಂದ ಸೌದೆ ತರುತ್ತಿದ್ದರು. ಪಟ್ಟಣದಲ್ಲಿ ಶವ ಸುಡಲು ಅಗತ್ಯವಿರುವ ಸೌದೆ ಹೇರಳವಾಗಿ ದೊರೆಯುತ್ತಿತ್ತು. ಆದರೆ ಈಚೆಗೆ ಅರಣ್ಯ ಇಲಾಖೆಯ ಕಠಿಣ ನಿಯಮಗಳಿಂದಾಗಿ ಕಾಡಿನಿಂದ ಸೌದೆ ತರುವುದು ನಿಂತಿದೆ.
ಆದ್ದರಿಂದ ಕುಟುಂಬದವರು ಶವ ಸುಡುವುದಕ್ಕೆ ಅಗತ್ಯವಿರುವಷ್ಟು ಕಟ್ಟಿಗೆಯನ್ನು ಹಣ ನೀಡಿ ಅರಣ್ಯ ಇಲಾಖೆಯ ಡಿಪೊದಿಂದ ತರುತ್ತಿದ್ದರು. ಆದರೆ ಕೆಲವು ತಿಂಗಳಿನಿಂದ ಅರಣ್ಯ ಇಲಾಖೆಯೂ ಸೌದೆ ನೀಡುತ್ತಿಲ್ಲ.
ಅಗತ್ಯ ಸಮಯಕ್ಕೆ ಕಟ್ಟಿಗೆ ಸಿಗದ ಕಾರಣ ಶವ ಸಂಸ್ಕಾರಕ್ಕೆ ಪರದಾಡಬೇಕಾಗಿದೆ. ಇದನ್ನು ತಪ್ಪಿಸಲು ಪಟ್ಟಣದ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಮೃತದೇಹವನ್ನು ಮನೆಯಲ್ಲಿಟ್ಟುಕೊಂಡು ಸೌದೆಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಗತ್ಯವಿರುವಷ್ಟು ಸೌದೆ ಸಂಗ್ರಹಿಸಿ ಅಂತ್ಯಸಂಸ್ಕಾರಕ್ಕೆ ಒದಗಿಸಬೇಕು.
-ಗುಡ್ಡಳಿ ಕೃಷ್ಣ ಪಟ್ಟಣದ ನಿವಾಸಿ
ಶಿಕಾರಿಪುರ ವಲಯ ವ್ಯಾಪ್ತಿಯಲ್ಲಿ ನೆಡುತೋಪು ಇಲ್ಲದಂತಾಗಿದೆ. ಆದ್ದರಿಂದ ಅಂತ್ಯ ಸಂಸ್ಕಾರಕ್ಕೆ ಉರುವಲು ಸೌದೆ ನೀಡಲು ಸಾಧ್ಯವಾಗುತ್ತಿಲ್ಲ. ಸಾಗರದಿಂದ ಕಟ್ಟಿಗೆ ತಂದುಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
-ಸಿದ್ದಯ್ಯ ಬಿ. ಹಿರೇಮಠ್ ವಲಯ ಅರಣ್ಯಾಧಿಕಾರಿ ಶಿಕಾರಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.