ADVERTISEMENT

ಶಿವಮೊಗ್ಗ | ಗಣೇಶ ಉತ್ಸವ: ಪೆಂಡಾಲ್‌ನಲ್ಲಿ ಅರಳಿದ ಕ್ರೀಡಾ ಲೋಕ...

3,584 ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ; ಎಪಿಎಂಸಿ ಪ್ರಾಂಗಣದಲ್ಲಿ ಕ್ರೀಡಾ ಗಣಪ

ನಾಗರಾಜ ಹುಲಿಮನೆ
Published 27 ಆಗಸ್ಟ್ 2025, 4:43 IST
Last Updated 27 ಆಗಸ್ಟ್ 2025, 4:43 IST
<div class="paragraphs"><p>ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ‘ಖೇಲೊ ಇಂಡಿಯಾ’ ಪರಿಕಲ್ಪನೆಯಡಿ ಪೆಂಡಾಲ್ ಸಿದ್ಧಪಡಿಸಿರುವುದು&nbsp; &nbsp;</p></div>

ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ‘ಖೇಲೊ ಇಂಡಿಯಾ’ ಪರಿಕಲ್ಪನೆಯಡಿ ಪೆಂಡಾಲ್ ಸಿದ್ಧಪಡಿಸಿರುವುದು   

   

ಪ್ರಜಾವಾಣಿ ಚಿತ್ರಗಳು; ಶಿವಮೊಗ್ಗ ನಾಗರಾಜ

ಶಿವಮೊಗ್ಗ: ಅಲ್ಲಲ್ಲಿ, ವಿವಿಧ ವಿನ್ಯಾಸಗಳಲ್ಲಿ ತೂಗು ಹಾಕಿರುವ ಕ್ರಿಕೆಟ್‌ ಬ್ಯಾಟ್‌ಗಳು. ಟೆನಿಸ್‌ ಹಾಗೂ ಬಗೆ ಬಗೆಯ ಬಣ್ಣದ ‘ಸ್ಮೈಲಿ’ ಚೆಂಡುಗಳಲ್ಲಿ ಅರಳಿರುವ ವೃತ್ತಾಕಾರದ ಆಕೃತಿ. ನೋಡುಗರ ಕೈ ಬೀಸಿ ಕರೆಯುತ್ತಿರುವ ಕೇರಂ ಬೋರ್ಡ್‌, ಹಾಕಿ ಸ್ಟಿಕ್‌, ಬ್ಯಾಡ್ಮಿಂಟನ್‌ ರ‍್ಯಾಕೆಟ್‌ಗಳ ಕಲಾಕೃತಿ. ಒಮ್ಮೆ ಒಳ ಹೊಕ್ಕರೆ ಹೊಸತೊಂದು ಲೋಕಕ್ಕೆ ಕಾಲಿಟ್ಟ ಅನುಭವ...

ADVERTISEMENT

ಇಲ್ಲಿನ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ತಲೆ ಎತ್ತಿರುವ ಗಣೇಶ ಪೆಂಡಾಲ್‌ನ ಝಲಕ್‌ ಇದು. ಈ ಮಂಟಪ ಸಂಪೂರ್ಣ ಕ್ರೀಡಾಮಯವಾಗಿದೆ. 

‘ಎಪಿಎಂಸಿ ವಿನಾಯಕ ಗೆಳೆಯರ ಬಳಗ’ವು ಈ ಬಾರಿ ‘ಖೇಲೊ ಇಂಡಿಯಾ’ ಪರಿಕಲ್ಪನೆಯಡಿ ಪೆಂಡಾಲ್ ನಿರ್ಮಿಸಿದ್ದು, 50,000ಕ್ಕೂ ಅಧಿಕ ಕ್ರೀಡಾ ಸಾಮಗ್ರಿ ಬಳಸಿ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಇದು ಎಲ್ಲರ ಕಣ್ಮನ ಸೆಳೆಯುತ್ತಿದೆ.

‘ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬಂದು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು’ ಎಂಬ ಘೋಷ ವಾಕ್ಯದಡಿ ಗಣೇಶನ ಪ್ರತಿಷ್ಠಾಪನೆಗೆ ವೇದಿಕೆ ಸಿದ್ಧಪಡಿಸಲಾಗಿದೆ. ಶ್ರೀ ಸಾಯಿ ಫ್ಲವರ್ ತಂಡದ 30ಕ್ಕೂ ಹೆಚ್ಚು ಕಲಾವಿದರು ಒಂದು ತಿಂಗಳಿಂದ ಶ್ರಮವಹಿಸಿ ಪೆಂಡಾಲ್ ನಿರ್ಮಿಸಿದ್ದಾರೆ. ಇದು ಭಕ್ತರು ಹಾಗೂ ನಾಗರಿಕರ ಆಕರ್ಷಣೆಯಾಗಲಿದೆ’ ಎಂದು ಬಳಗದ ಎಂ. ಆದರ್ಶ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪೆಂಡಾಲ್ ಒಳಗೆ ಹಾಗೂ ಹೊರಾಂಗಣದಲ್ಲಿ 10,000ಕ್ಕೂ ಹೆಚ್ಚು ಟೆನಿಸ್ ಹಾಗೂ ಸ್ಮೈಲಿ ಚೆಂಡು ಬಳಸಿ ಅಲಂಕಾರ ಮಾಡಲಾಗಿದೆ. 350ಕ್ಕೂ ಹೆಚ್ಚು ಕ್ರಿಕೆಟ್ ಬ್ಯಾಟ್‌ಗಳನ್ನು ಒಳಾಂಗಣದಲ್ಲಿ ವಿವಿಧ ವಿನ್ಯಾಸದಲ್ಲಿ ತೂಗು ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು.  

‘ಹಾಕಿ ಸ್ಟಿಕ್‌ 50, ಕೇರಂ ಬೋರ್ಡ್ 50, ಯೋಗಾ ಮ್ಯಾಟ್ 50, ಗಾಳಿಪಟ 250, ಗಿಲ್ಲಿ ದಾಂಡು 200, ಅಳಗುಳಿ ಮನೆ ಆಟದ ಮಣೆ 50, ಬುಗುರಿ 300, ಚಾಟಿ ಬಿಲ್ಲು 300, ಸ್ಕಿಪ್ಪಿಂಗ್ ಹಗ್ಗ 500, ಸ್ಟಂಪ್‌ಗಳು 100, ಶಟಲ್ ಕಾಕ್ 3,000, ವಾಲಿಬಾಲ್ ಹಾಗೂ ಫುಟ್‌ಬಾಲ್ 500, ಚೆಸ್ ಹಾಗೂ ಹಾವು ಏಣಿ ಆಟದ ಬೋರ್ಡ್ 200, ಕೋಲಾಟದ ಕೋಲು 100, ಜಾವೆಲಿನ್ 10 ಸೇರಿ ವಿವಿಧ ಮಾದರಿಯ ಕ್ರೀಡಾ ಪರಿಕರಗಳನ್ನು ಬಳಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಪೆಂಡಾಲ್ ಒಳಾಂಗಣದಲ್ಲಿ ಕಾರಿಡಾರ್ ನಿರ್ಮಿಸಲಾಗಿದ್ದು, ಕ್ರಿಕೆಟ್‌ನ ದಿಗ್ಗಜ ಆಟಗಾರರಾದ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಸ್ಮೃತಿ ಮಂದಾನ ಅವರ ಪ್ರತಿಕೃತಿ ಇರಿಸಲಾಗುವುದು. ಈಗಾಗಲೇ ಪೆಂಡಾಲ್ ಹೊರಾಂಗಣದಲ್ಲಿ ಅರ್ಧ ಚಂದ್ರಾಕೃತಿಯ ಸೆಲ್ಫಿ ಸ್ಪಾಟ್ ನಿರ್ಮಿಸಲಾಗಿದೆ’ ಎಂದು ಕಲಾವಿದ ಅಭಿಷೇಕ್ ತಿಳಿಸಿದರು.

ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ‘ಖೇಲೊ ಇಂಡಿಯಾ’ ಪರಿಕಲ್ಪನೆಯಡಿ ಪೆಂಡಾಲ್ ಸಿದ್ಧಪಡಿಸಿರುವುದು
ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ‘ಖೇಲೊ ಇಂಡಿಯಾ’ ಪರಿಕಲ್ಪನೆಯಡಿ ಪೆಂಡಾಲ್ ಸಿದ್ಧಪಡಿಸಿರುವುದು
ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ‘ಖೇಲೊ ಇಂಡಿಯಾ’ ಪರಿಕಲ್ಪನೆಯಡಿ ಪೆಂಡಾಲ್ ಸಿದ್ಧಪಡಿಸಿರುವುದು
ಬಳಗದ ಸಹಕಾರದಿಂದ ಪೆಂಡಾಲ್ ನಿರ್ಮಿಸಲು ಅಂದಾಜು ₹17 ಲಕ್ಷ ವ್ಯಯಿಸಲಾಗಿದೆ. ಮುಂಬರುವ ದಿನಗಳಲ್ಲೂ ಇದೇ ಮಾದರಿಯ ಹಬ್ಬ ಆಚರಿಸಲು ಚಿಂತನೆ ಇದೆ
ಎಂ. ಆದರ್ಶ ಎಪಿಎಂಸಿ ವಿನಾಯಕ ಗೆಳೆಯರ ಬಳಗ

ವ್ಯಾಪಾರ ವಹಿವಾಟಿಗೆ ಮಳೆ ಅಡ್ಡಿ:

ನಗರದ ಸೈನ್ಸ್ ಮೈದಾನದಲ್ಲಿ 50ಕ್ಕೂ ಹೆಚ್ಚು ಗಣೇಶ ವಿಗ್ರಹ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಮಧ್ಯಾಹ್ನದ ಹೊತ್ತಿಗೆ ಸುರಿದ ಮಳೆ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಕಿರಿಕಿರಿ ಉಂಟುಮಾಡಿತು. ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಿದ್ದು ಆಯಾ ವಿನ್ಯಾಸದ ಆಧಾರದ ಮೇಲೆ ಬೆಲೆ ನಿಗದಿ ಪಡಿಸಲಾಗಿದೆ. ₹ 400ರಿಂದ ₹ 25000ದವರೆಗೂ ಮೂರ್ತಿಗಳು ಮಾರಾಟವಾಗಿವೆ. ಬಸವನ ಮೇಲೆ ಕುಳಿತ ಶಿವನ ಭುಜದ ಮೇಲೆ ಕುಳಿತಿರುವ ವಿಶೇಷ ಆಸನಾರೂಢ ಗಣೇಶ ಮೂರ್ತಿಗಳು ಗಮನ ಸೆಳೆದವು. ತಾಲ್ಲೂಕು ಹಾಗೂ ಗ್ರಾಮೀಣ ಭಾಗಗಳಿಂದ ಜನರು ಆಗಮಿಸಿ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ.

3584 ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ:

ಜಿಲ್ಲೆಯಾದ್ಯಂತ ಗಣೇಶೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಬ್ಬದ ಮುನ್ನಾದಿನವಾದ ಮಂಗಳವಾರ ತುಂತುರು ಮಳೆಯಲ್ಲಿಯೇ ಪೂಜೆಗೆ ಅಗತ್ಯವಿರುವ ವಸ್ತುಗಳ ಖರೀದಿ ಭರಾಟೆ ನಡೆಯಿತು. ನಗರದಲ್ಲಿ ಕಣ್ಮನ ಸೆಳೆಯುವ ಬೃಹತ್ ಪೆಂಡಾಲ್‌ಗಳು ಸಿದ್ಧಗೊಂಡಿದ್ದು ವಿಘ್ನ ವಿನಾಯಕನ ಪ್ರತಿಷ್ಠಾಪನೆಗೆ ಅದ್ದೂರಿ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ವರ್ಷ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ವರ್ಷವೂ ಮಾರುಕಟ್ಟೆಗೆ ತರಹೇವಾರಿ ಗಣೇಶ ಮೂರ್ತಿಗಳು ಬಂದಿದ್ದು ಜಿಲ್ಲೆಯಲ್ಲಿ ಒಟ್ಟು 3584 ಸಾರ್ವಜನಿಕ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಮಂಡಳಿಗಳು ಅನುಮತಿ ಪಡೆದುಕೊಂಡಿವೆ. ಈ ಪೈಕಿ ನಗರ ವ್ಯಾಪ್ತಿಯಲ್ಲೇ ಅಂದಾಜು 700ಕ್ಕೂ ಅಧಿಕ ವಿಗ್ರಹಗಳು ಪ್ರತಿಷ್ಠಾಪನೆಗೊಳ್ಳಲಿವೆ.

‘ಸರ್ಕಾರಿ ಶಾಲೆಗಳಿಗೆ ಸಾಮಗ್ರಿ ಕೊಡುಗೆ’:

‘ಗಣೇಶೋತ್ಸವ ಮುಗಿದ ಬಳಿಕ ಕ್ರೀಡಾ ಸಾಮಗ್ರಿಗಳನ್ನು ನಗರದ ಹೊರ ವಲಯದಲ್ಲಿರುವ  ಸರ್ಕಾರಿ ಶಾಲೆಗಳಿಗೆ ಕೊಡುಗೆ ನೀಡಲಾಗುವುದು. ಪ್ರಾಂಗಣದಲ್ಲಿ 5.5 ಅಡಿಯ ದಗದುಶೇತ್ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು ಎಪಿಎಂಸಿ ಆವರಣದ ಬಾವಿಯಲ್ಲಿಯೇ ಸೆ.10 ರಂದು ವಿಸರ್ಜನೆ ಮಾಡಲಾಗುವುದು. ಅದೇ ರೀತಿ 14 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಎಪಿಎಂಸಿ ವಿನಾಯಕ ಗೆಳೆಯರ ಬಳಗದ ಎಂ. ಆದರ್ಶ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.