ADVERTISEMENT

ಶಿವಮೊಗ್ಗ: ಅಮೃತ–2 ಅಡಿ ನಾಲ್ಕು ಕೆರೆಗಳ ಅಭಿವೃದ್ಧಿ- ಜಿಲ್ಲಾಧಿಕಾರಿ

ಡಿಪಿಆರ್ ಪರಿಶೀಲನೆ; ಶೀಘ್ರ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:28 IST
Last Updated 1 ಜನವರಿ 2026, 5:28 IST
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು   

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಪುರಲೆ, ನವುಲೆ, ಗೋಪಶೆಟ್ಟಿಕೊಪ್ಪ ಮತ್ತು ತ್ಯಾವರಚಟ್ನಳ್ಳಿ ಕೆರೆಗಳನ್ನು ಕೇಂದ್ರ ಪುರಸ್ಕೃತ ಅಮೃತ-2 ಯೋಜನೆಯಡಿ ಶೀಘ್ರ ಕಾಮಗಾರಿ ಆರಂಭಿಸುವಂತೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಗರ ಯೋಜನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು. 

ನಗರದಲ್ಲಿ ಬುಧವಾರ ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿನ ಜಲಮೂಲಗಳ ಅಭಿವೃದ್ಧಿ ಕಾಮಗಾರಿಗಳ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

2046ರ ವೇಳೆಗೆ ಜನಸಂಖ್ಯೆಗೆ ಅನುಗುಣವಾಗಿ ಸದರಿ ಪ್ರದೇಶದಲ್ಲಿ ಕೈಗೊಳ್ಳಬಹುದಾದ ಸಂಭಾವ್ಯ ಕಾಮಗಾರಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ADVERTISEMENT

ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಕೆರೆಯ ಸುತ್ತ ಇರುವ ಒಳಚರಂಡಿ ಜಾಲ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲು ಪಾಲಿಕೆ ಎಂಜಿನಿಯರ್‌ಗೆ ಸೂಚಿಸಿದರು. ಕೆರೆಗಳ ಏರಿ ಅಭಿವೃದ್ಧಿ ಕೈಗೊಳ್ಳುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಗ್ರಾವೆಲ್/ ಮುರ್ರಮ್ ಉಪಯೋಗಿಸುವಂತೆ ಸೂಚಿಸಿದ ಅವರು, ಸದರಿ ನಾಲ್ಕು ಕಾಮಗಾರಿಗಳ ಡಿಪಿಆರ್ ಅನುಮೋದಿಸಿ ಮುಂದಿನ ಕ್ರಮಕ್ಕಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಲು ಆದೇಶಿಸಿದರು.  

ಒಳಚರಂಡಿ ಸಂಸ್ಕರಣಾ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲದ ಕಾರಣ ಬಹುತೇಕ ಕೆರೆಗಳಿಗೆ ಕಲುಷಿತ ನೀರು, ತ್ಯಾಜ್ಯ ಬಂದು ಸೇರುತ್ತಿದೆ. ಕೆರೆಯಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಕೆರೆಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿ ಪುರುಷೋತ್ತಮ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕಿ ಆಶಾ ಕುಮಾರಿ, ಮಹಾನಗರ ಪಾಲಿಕೆ ಎಂಜಿನಿಯರ್ ತೇಜೂಪ್ರಸಾದ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶಿಲ್ಪಾ ಉಪಸ್ಥಿತರಿದ್ದರು.

ಕೆರೆಗಳಲ್ಲಿ ಬೆಳೆದು ನಿಂತಿರುವ ಗಿಡ-ಗಂಟೆಗಳ ಹೂಳು ತೆಗೆದು ಅಚ್ಚುಕಟ್ಟು ಪ್ರದೇಶದಲ್ಲಿ ಉದ್ಯಾನ ನಿರ್ಮಿಸಿ ಜಲಮೂಲಗಳನ್ನು ಅಭಿವೃದ್ಧಿಗೊಳಿಸಿ ನೀರಿನ ಗುಣಮಟ್ಟ ಸುಧಾರಿಸುವ ಉದ್ದೇಶ ಹೊಂದಲಾಗಿದೆ.

-ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

---

ಕೆರೆ ಅಭಿವೃದ್ಧಿಗೆ ₹20.50 ಕೋಟಿ ಅನುದಾನ ಶಿವಮೊಗ್ಗ ಮಹಾನಗರ ಪಾಲಿಕೆಗೆ ಐದು ಜಲಮೂಲಗಳ ಪುನಃಶ್ಚೇತನಕ್ಕೆ ₹20.50 ಕೋಟಿ ಅನುದಾನ ನಿಗದಿಪಡಿಸಿದೆ. ಅದರಲ್ಲಿ ಪುರಲೆ ಕೆರೆಗೆ ₹571 ಕೋಟಿ ನವುಲೆ ಕೆರೆಗೆ ₹5.87 ಕೋಟಿ ತ್ಯಾವರೆಚಟ್ನಹಳ್ಳಿ (ರಾಗಿಗುಡ್ಡ) ಕೆರೆಗೆ ₹5.82 ಕೋಟಿ ಹಾಗೂ ಗೋಪಿಶೆಟ್ಟಿಕೊಪ್ಪ ಕೆರೆಗೆ ₹608 ಕೋಟಿ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.