
ಶಿವಮೊಗ್ಗ: ಮಂದಿರ ಮಸೀದಿ ಚರ್ಚುಗಳಲ್ಲಿ ಕಾಣದ ಭಾರತವನ್ನು ತರಗತಿಯ ಒಳಗೆ ನೋಡಬಹುದು ಎಂದು ಚಿಂತಕ ಪ್ರೊ.ಬಿ.ಎಲ್.ರಾಜು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಶುಕ್ರವಾರ ದೊಡ್ಡ ಮತ್ತಲಿ ಗ್ರಾಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ‘ಸಂವಿಧಾನದ ಆಶಯಗಳು ಈ ಹೊತ್ತಿನ ಭಾರತ’ ವಿಚಾರವಾಗಿ ಮಾತನಾಡಿದರು.
‘ನಮ್ಮ ನಡುವೆ ಅನೇಕ ತಾರತಮ್ಯಗಳಿವೆ. ಮಸೀದಿ ಮಂದಿರ ಚರ್ಚುಗಳಲ್ಲಿ ಇಲ್ಲದ ಸಮಾನತೆಯನ್ನು, ನಾವು ಕಾಣುವ ಒಂದೇ ಒಂದು ಜಾಗವೆಂದರೆ ಅದು ತರಗತಿಯ ಕೊಠಡಿ. ಇಲ್ಲಿ ಎಲ್ಲರೂ ಜೊತೆಯಾಗಿ ಬೆಂಚುಗಳ ಮೇಲೆ ಕುಳಿತು ಕಲಿಯುತ್ತೇವೆ. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ನೋಡುವ ರೀತಿಯೇ ಸಂವಿಧಾನದ ಆಶಯ’ ಎಂದರು.
‘ಸಮಾಜ ಸೇವೆಯಲ್ಲಿ ಯುವಜನರ ಪಾತ್ರ’ ಕುರಿತು ದಾವಣಗೆರೆ ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಎಚ್. ಆರ್. ತಿಪ್ಪೇಸ್ವಾಮಿ ಮಾತನಾಡಿ, ‘ಸಮ ಸಮಾಜದ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು. ದೇಶದ ಪ್ರಗತಿಗೆ ಕಾರಣರಾಗಬೇಕು’ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಮಹಾತ್ಮ ಗಾಂಧಿ ಅವರ ಕನಸಾದ ಎನ್.ಎಸ್. ಎಸ್. ಚಿಂತನೆಗಳು ಬಹುತ್ವ ಭಾರತದ ಕನಸಾಗಿದೆ. ನಾವು ನಮ್ಮ ಭಾಷೆಯನ್ನು ಕಲಿತು ಆ ಮೂಲಕ ದೇಶವನ್ನು, ವಿಶ್ವವನ್ನು ಗ್ರಹಿಸುವುದು ಒಳ್ಳೆಯದು ಎಂದು ವಿವರಿಸಿದರು.
ದತ್ತಿ ದಾನಿ ಕೆ. ರಾಮಚಂದ್ರ ಮಾತನಾಡಿದರು. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ವೀಣಾ ವಸಂತ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಪ್ರಕಾಶ್ ಮರ್ಗನಳ್ಳಿ, ಜಿ. ಆರ್. ಲವ, ಎಂ. ಎಂ. ಸ್ವಾಮಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಯರಾದ ಪೃಥ್ವಿ ಸ್ವಾಗತಿಸಿ, ಎನ್. ಸಾರೀಕಾ ನಿರೂಪಿಸಿ, ಈಶ್ವರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.