ADVERTISEMENT

ಶಿವಮೊಗ್ಗ: ಶೇಂಗಾ ಸುಲಿವ ಕೈಯಂತ್ರಕ್ಕೆ ಪೇಟೆಂಟ್ ಶ್ರೇಯ

ಕೃಷಿ, ತೋಟಗಾರಿಕೆ ವಿವಿ: ಕೃಷಿ ಎಂಜಿನಿಯರಿಂಗ್ ವಿಭಾಗದಿಂದ ಅಭಿವೃದ್ಧಿ

ವೆಂಕಟೇಶ್ ಜಿ.ಎಚ್
Published 24 ಜನವರಿ 2025, 5:48 IST
Last Updated 24 ಜನವರಿ 2025, 5:48 IST
<div class="paragraphs"><p>ಬಬ್ಬೂರು ಫಾರಂನಲ್ಲಿ ಕೈಯಂತ್ರ ಬಳಸಿ ಮಹಿಳೆ ಶೇಂಗಾ ಸುಲಿದರು.</p></div>

ಬಬ್ಬೂರು ಫಾರಂನಲ್ಲಿ ಕೈಯಂತ್ರ ಬಳಸಿ ಮಹಿಳೆ ಶೇಂಗಾ ಸುಲಿದರು.

   

ಶಿವಮೊಗ್ಗ: ಎಂಟು ಗಂಟೆ ಅವಧಿಯಲ್ಲಿ 100 ಕೆ.ಜಿ.ಯಷ್ಟು ಶೇಂಗಾ ಸುಲಿಯುವ ಕೈಚಾಲಿತ ಯಂತ್ರವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವ್ಯಾಪ್ತಿಯ ಬಬ್ಬೂರು ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಎಂಜಿನಿಯರಿಂಗ್ ವಿಭಾಗ ಅಭಿವೃದ್ಧಿಪಡಿಸಿದೆ

ಅದಕ್ಕೆ ಈಗ ಕೇಂದ್ರ ಸರ್ಕಾರದ ಅಧೀನದ ಸಿಜಿಪಿಡಿಟಿಎಂ ಸಂಸ್ಥೆಯಿಂದ (Controller General of patents, Designs & Trade Marks) ಹಕ್ಕುಸ್ವಾಮ್ಯದ (ಪೇಟೆಂಟ್) ಶ್ರೇಯ ದೊರೆತಿದೆ.

ADVERTISEMENT

ಬೀಜ ಸುಲಿಯಲು ಅನುಕೂಲ:

ಎಂಜಿನ್ ಇಲ್ಲವೇ ವಿದ್ಯುತ್ ಚಾಲಿತ ಯಂತ್ರಗಳಿಂದ ಶೇಂಗಾ ಸುಲಿದಾಗ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳು ಒಡೆದು ಹಾನಿಗೀಡಾಗುತ್ತದೆ. ಹೀಗಾಗಿ ಕೃಷಿಕರು ಬಿತ್ತನೆಗೆ ಸಾಮಾನ್ಯವಾಗಿ ಕೈಯಿಂದ ಸುಲಿದ ಶೇಂಗಾ ಬೀಜ ಬಳಸುತ್ತಾರೆ. ಕೈಯಿಂದ ಸುಲಿದರೆ ಒಬ್ಬರು ದಿನಕ್ಕೆ 6 ಕೆ.ಜಿ ಶೇಂಗಾ ಸುಲಿಯಬಹುದು. ನುರಿತವರು 8 ಕೆ.ಜಿ.ಯಷ್ಟು ಸುಲಿಯುತ್ತಾರೆ. ಆದರೆ, ಬಬ್ಬೂರು ಫಾರಂನಲ್ಲಿ ಅಭಿವೃದ್ಧಿಪಡಿಸಿರುವ ಕೈಯಿಂದ ಚಲಾಯಿಸಬಹುದಾದ ಈ ಯಂತ್ರ ಪ್ರತೀ ಗಂಟೆಗೆ 12.3 ಕೆ.ಜಿಯಂತೆ ಎಂಟು ಗಂಟೆಗೆ 100 ಕೆ.ಜಿಯಷ್ಟು ಶೇಂಗಾ ಸುಲಿಯುತ್ತದೆ.

ಕಾರ್ಯನಿರ್ವಹಣೆ ಬಗೆ:

ಒಂದು ಕೈಯಿಂದ ಆಲಿಕೆ ಮೂಲಕ ಯಂತ್ರದ ಪಾತ್ರೆಗೆ ಕಾಯಿಗಳನ್ನು ಹಾಕುತ್ತಾ, ಮತ್ತೊಂದು ಕೈಯಿಂದ ಹಿಡಿಕೆ ತಿರುಗಿಸಿದರೆ ನಳಿಕೆ ಮೂಲಕ ಡ್ರಮ್‌ನ ಒಳಭಾಗಕ್ಕೆ ಬಿದ್ದು ರಬ್ಬರಿನ ತಿರುಗಣಿಯಿಂದ ಉಜ್ಜಿ ಶೇಂಗಾಕಾಯಿ ಸುಲಿಯುತ್ತದೆ. ಸಿಪ್ಪೆ ಮತ್ತು ಬೀಜ ಒಟ್ಟಿಗೆ ಜರಡಿ ಮೂಲಕ ಕೆಳಗೆ ಬೀಳುತ್ತದೆ. ವಿವಿಧ ಗಾತ್ರದ ಶೇಂಗಾ ಕಾಯಿ ಸುಲಿಯಲು ಬೇರೆ ಬೇರೆ ವಿನ್ಯಾಸದ ಜರಡಿಗಳನ್ನು ಅಳವಡಿಸಲಾಗಿದೆ.

ಬಬ್ಬೂರು ಫಾರಂನ ಕೃಷಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರೊ.ಶರಣಪ್ಪ ಜಂಗಂಡಿ, ಪ್ರೊ.ರಾಜಶೇಖರ ಬಾರಕೇರ, ಪ್ರೊ.ಅರವಿಂದ್‌ ಯಾದವ್‌ ನೇತೃತ್ವದ ತಂಡ ಈ ಯಂತ್ರ ಅಭಿವೃದ್ಧಿಪಡಿಸಿದೆ. ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ ಹಾಗೂ ನಿವೃತ್ತ ಕುಲಪತಿ ಎಂ.ಕೆ.ನಾಯಕ್ ಈ ತಂಡಕ್ಕೆ ನೆರವಾಗಿದ್ದಾರೆ.

‘ಗ್ರಾಮೀಣ ಭಾಗದಲ್ಲಿ ಶೇಂಗಾ ಸುಲಿಯಲು ಜನರು ಸಿಗುತ್ತಿಲ್ಲ. ನಿರಂತರವಾಗಿ ಸುಲಿದರೆ ಕೈ ನೋಯುವುದರಿಂದ ಕೆಲಸಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಅದನ್ನು ಗಮನಿಸಿಯೇ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಯಂತ್ರ ಚಾಲಿತ ಉಪಕರಣದಲ್ಲಿ ಶೇಂಗಾ ಸುಲಿದಾಗ ಶೇ 15ರಿಂದ 20ರಷ್ಟು ಬೀಜಗಳು ಮೂತಿ ಒಡೆದು ಹಾನಿಗೀಡಾಗುತ್ತವೆ. ಅಂಥ ಬೀಜಗಳು ಬಿತ್ತನೆಗೆ ಬರುವುದಿಲ್ಲ. ಅದೇ ಕೈ ಯಂತ್ರದಲ್ಲಿ ಸುಲಿದರೆ ಶೇ 3ರಿಂದ 4 ಪ್ರಮಾಣದಷ್ಟು ಮಾತ್ರ ಹಾನಿಗೀಡಾಗುತ್ತವೆ. ಬಿತ್ತನೆಗೆ ಉತ್ಕೃಷ್ಟ ಬೀಜ ಸಿಗುವ ಜೊತೆಗೆ ಸಮಯ, ಖರ್ಚು ಎಲ್ಲವೂ ಮಿಗುತ್ತದೆ’ ಎಂದು ಪ್ರೊ.ಶರಣಪ್ಪ ಜಂಗಂಡಿ ಹೇಳುತ್ತಾರೆ.

ಹಕ್ಕುಸ್ವಾಮ್ಯ ದೊರೆತಿರುವುದರಿಂದ ಇನ್ನು ಮುಂದೆ ಯಾರಾದರೂ ಈ ಕೈ ಯಂತ್ರ ಖರೀದಿಸಿದರೆ ಇಲ್ಲವೇ ಅದರ ಉತ್ಪಾದನೆ ಆರಂಭಿಸಿದರೆ ವಿಶ್ವವಿದ್ಯಾಲಯಕ್ಕೆ ನಿರ್ದಿಷ್ಟ ರಾಯಧನ ಸಿಗಲಿದೆ
ಪ್ರೊ.ಆರ್.ಸಿ. ಜಗದೀಶ್, ಕುಲಪತಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ

ನೆರೆಯ ರಾಜ್ಯದಿಂದ ಬೇಡಿಕೆ

‘ಬಬ್ಬೂರು ಫಾರಂನಲ್ಲಿ ಅಭಿವೃದ್ಧಿಪಡಿಸಿರುವ ಈ ಕೈ ಯಂತ್ರದ ಬೆಲೆ ₹ 4500 ಮಾತ್ರ. ಶೇಂಗಾ ಹೆಚ್ಚು ಬೆಳೆಯುವ ಚಿತ್ರದುರ್ಗ ದಾವಣಗೆರೆ ವಿಜಯನಗರ ತುಮಕೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಯಂತ್ರಕ್ಕೆ ಬೇಡಿಕೆ ಹೆಚ್ಚಿದೆ. 6 ತಿಂಗಳಲ್ಲಿಯೇ 3500 ಯಂತ್ರಗಳು ಮಾರಾಟವಾಗಿವೆ’ ಎಂದು ‍ಪ್ರೊ.ಶರಣಪ್ಪ ಹೇಳುತ್ತಾರೆ. ಕರ್ನಾಟಕ ಮಾತ್ರವಲ್ಲ ಪಕ್ಕದ ತಮಿಳುನಾಡು ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರೂ ಈ ಯಂತ್ರಗಳ ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.