ADVERTISEMENT

ಶಿವಮೊಗ್ಗ: ಬಸ್ ನಿಲ್ದಾಣದಿಂದ ಇನ್ನು ಪ್ರೀ ಪೇಯ್ಡ್ ಆಟೊ ಸೇವೆ

ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಜಿಲ್ಲಾಡಳಿತದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:24 IST
Last Updated 24 ಡಿಸೆಂಬರ್ 2025, 5:24 IST
ಶಿವಮೊಗ್ಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯ ನೋಟ
ಶಿವಮೊಗ್ಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯ ನೋಟ   

ಶಿವಮೊಗ್ಗ: ಪ್ರಯಾಣಿಕರ ಅನುಕೂಲತೆ ನಿಟ್ಟಿನಲ್ಲಿ ನಗರದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿ ನೂತನವಾಗಿ ಆಟೋ ರಿಕ್ಷಾ ಪ್ರೀ ಪೈಯ್ಡ್ ಕೌಂಟರ್‌ಗಳ ತೆರೆಯಲಾಗುತ್ತಿದೆ. ಅದಕ್ಕೆ ಆಟೊ ರಿಕ್ಷಾ ಚಾಲಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಟೋ ರಿಕ್ಷಾ ಸಂಘಗಳು ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ನಗರದ ರೈಲ್ವೆ ನಿಲ್ದಾಣದ ಬಳಿ ಆಟೊ ರಿಕ್ಷಾ ಪ್ರೀ ಪೈಯ್ಡ್ ಕೌಂಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಯಾಣಿಕರಿಗೂ ಅನುಕೂಲವಾಗುತ್ತಿದೆ. ಇದೇ ರೀತಿ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲೂ ಕೌಂಟರ್ ತೆರೆಯಲು ತೀರ್ಮಾನಿಸಿದ್ದು, ಪ್ರಯಾಣಿಕರು ಅದರ ಅನುಕೂಲ ಪಡೆಯಬಹುದು ಎಂದರು.

ADVERTISEMENT

ಮುಂಜಾನೆ 4.45, ಬೆಳಿಗ್ಗೆ 11ಕ್ಕೆ, ಸಂಜೆ 7.30 ಹಾಗೂ ರಾತ್ರಿ 9.30ರ ಸಮಯದಲ್ಲಿ ಪ್ರಯಾಣಿಕರು ಮನೆಗೆ ತೆರಳಲು ಆಟೊ ರಿಕ್ಷಾಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ರೈಲ್ವೆ ನಿಲ್ದಾಣದ ಬಳಿಯ ಪ್ರೀ ಪೈಯ್ಡ್ ಕೌಂಟರ್‌ಗೆ ಹೆಚ್ಚಿನ ಸಿಬ್ಬಂದಿ ನೇಮಿಸುವಂತೆ ಹಾಗೂ ಕೌಂಟರ್‌ನಲ್ಲಿ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅದರ ನಿರ್ವಹಣೆ ಮಾಡುತ್ತಿರುವ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸಂಸ್ಥೆ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಎಎಸ್ಪಿ ಬಿ.ಕಾರಿಯಪ್ಪ, ಆರ್‌ಟಿಒ ಅಧೀಕ್ಷಕ ಶಶಿಧರ್, ಸಂಚಾರ ವಿಭಾಗದ ಸಿಪಿಐ ದೇವರಾಜ್, ಮಹಾನಗರಪಾಲಿಕೆಯ ಅಧಿಕಾರಿ, ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸಂಸ್ಥೆ ಅಧಿಕಾರಿಗಳು ಹಾಗೂ ಆಟೊ ರಿಕ್ಷಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.

ಜನವರಿ 15ರಿಂದ ಕೌಂಟರ್ ಕಾರ್ಯಾರಂಭ..

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಬಳಿ ಜ.15ರಿಂದ ಪ್ರಿ–ಪೇಯ್ಡ್ ಕೌಂಟರ್ ಆರಂಭಿಸಲು ಶಿವಮೊಗ್ಗದ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸಂಸ್ಥೆ ಕಾರ್ಯದರ್ಶಿಗೆ ಅನುಮತಿ ನೀಡಲಾಗಿದೆ. ಪೊಲೀಸ್ ಹಾಗೂ ಆರ್‌ಟಿಓ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಕೌಂಟರ್‌ಗೆ ಸ್ಥಳ ನಿಗದಿಪಡಿಕೊಡಬೇಕು. ಎರಡೂ ಇಲಾಖೆಗಳು ಜಂಟಿಯಾಗಿ ತಪಾಸಣೆ ನಡೆಸಿ ಜಾಹಿರಾತು ಫಲಕ ಹಾಕಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ ಆಟೋ ಚಾಲಕರು ಕಡ್ಡಾಯವಾಗಿ ಪರವಾನಗಿ ಮತ್ತು ಬ್ಯಾಡ್ಜ್ ಸೇರಿದಂತೆ ಅಗತ್ಯ ದಾಖಲೆಗಳ ಇಟ್ಟುಕೊಂಡು ಶಿಸ್ತಿನಿಂದ ಕಾರ್ಯ ನಿರ್ವಹಿಸಬೇಕು. ಪ್ರೀ ಪೇಯ್ಡ್ ಆಟೋ ರಿಕ್ಷಾಗಳ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕೆ ಆಟೋ ಸಂಘಗಳು ಕೂಡ ಸಹಕಾರ ನೀಡಬೇಕು
ಗುರುದತ್ತ ಹೆಗಡೆ, ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.