ADVERTISEMENT

ಶಿವಮೊಗ್ಗ | ಪಠ್ಯಪುಸ್ತಕ ಪೂರೈಕೆ ವಿಳಂಬ; ವಿದ್ಯಾರ್ಥಿಗಳ ಪರದಾಟ

ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ 53.83ರಷ್ಟು ಮಾತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 7:47 IST
Last Updated 13 ಜೂನ್ 2022, 7:47 IST
ಭದ್ರಾವತಿ ಬಿಇಒ ಎ.ಕೆ.ನಾಗೇಂದ್ರಪ್ಪ ಅವರ ನೇತೃತ್ವದ ತಂಡ ಶಿಕ್ಷಕರಿಗೆ ಏರ್ಪಡಿಸಿದ್ದ ಕಲಿಕಾ ಚೇತರಿಕೆ ಉಪಕ್ರಮ ಶಿಬಿರದಲ್ಲಿ ಸಂವಾದ ನಡೆಸಿದರು
ಭದ್ರಾವತಿ ಬಿಇಒ ಎ.ಕೆ.ನಾಗೇಂದ್ರಪ್ಪ ಅವರ ನೇತೃತ್ವದ ತಂಡ ಶಿಕ್ಷಕರಿಗೆ ಏರ್ಪಡಿಸಿದ್ದ ಕಲಿಕಾ ಚೇತರಿಕೆ ಉಪಕ್ರಮ ಶಿಬಿರದಲ್ಲಿ ಸಂವಾದ ನಡೆಸಿದರು   

ಶಿವಮೊಗ್ಗ: ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಣೆ ಆಗದೇ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿವಾದದಿಂದ ಉಂಟಾದ ವಿತರಣೆ ವಿಳಂಬ, ಮುದ್ರಣ ಕಾಗದದ ಕೊರತೆ ಕಾರಣಗಳಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಲ್ಲದೆ ಪಾಠ ಕೇಳಬೇಕಾಗಿದೆ. ಜೊತೆಗೆ ಪರಿಷ್ಕರಣೆಗೊಂಡ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷೆ ಪಠ್ಯಪುಸ್ತಕಗಳು ಇನ್ನೂ ಪೂರೈಕೆ ಆಗಿಲ್ಲ.

ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹೇಳುವುದನ್ನು ಕೇಳುವುದಷ್ಟೇ ಸಾಧ್ಯವಾಗುತ್ತಿದೆ. ಪುಸ್ತಕಗಳ ಕೊರತೆಯಿಂದಾಗಿ ಮನೆಪಾಠಕ್ಕೆ ಅಗತ್ಯವಿರುವ ಓದು ಸಾಧ್ಯವಾಗುತ್ತಿಲ್ಲ.

ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 17,25,592 ಪಠ್ಯಪುಸ್ತಕಗಳು ಬೇಕಾಗಿವೆ. ಇಲ್ಲಿಯವರೆಗೆ 9,28,923 ಪುಸ್ತಕಗಳು ಅಂದರೆ ಶೇ 53.83ರಷ್ಟು ಮಾತ್ರ ವಿತರಣೆಯಾಗಿವೆ.

ADVERTISEMENT

ಆತಂಕ: ಪರಿಷ್ಕೃತ ಪಠ್ಯಪುಸ್ತಕಗಳ ಬಗೆಗಿನ ವಿವಾದ ಜೋರಾಗಿದೆ. ಮೊದಲು ಪರಿಷ್ಕರಣೆಯನ್ನು ಸಮರ್ಥಿಸಿಕೊಂಡೇ ಬಂದಿದ್ದ ಸರ್ಕಾರ, ವಿರೋಧ ಜೋರಾದ ನಂತರ ಪುನರ್‌ ಪರಿಶೀಲಿಸುವ ಮಾತನಾಡುತ್ತಿದೆ. ಮತ್ತೆ ಪುಸ್ತಕಗಳು ಪರಿಷ್ಕರಣೆಗೊಂಡರೆ ಮುದ್ರಣಗೊಂಡು ಶಾಲೆಗಳನ್ನು ತಲುಪುವುದು ಯಾವಾಗ ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ.

ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳ ವಿವರ: 6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ವಿಷಯದ ಎಲ್ಲ ಮಾಧ್ಯಮದ ಪುಸ್ತಕಗಳು, 3ನೇ ತರಗತಿ ಹೊರತುಪಡಿಸಿ 10ನೇ ತರಗತಿವರೆಗಿನ ಪ್ರಥಮ ಭಾಷೆ ಕನ್ನಡ, 6, 8, 9ನೇ ತರಗತಿಯ ದ್ವಿತೀಯ ಭಾಷೆಯ ಕನ್ನಡ ಹಾಗೂ 7, 8, 9ನೇ ತರಗತಿಯ ತೃತೀಯ ಭಾಷೆ ಕನ್ನಡ ಪುಸ್ತಕಗಳು ಪರಿಷ್ಕರಣೆಗೊಂಡಿವೆ.

ಬುಕ್ ಬ್ಯಾಂಕ್ ಸದ್ಬಳಕೆಯಾಗುತ್ತಿದೆ

ಭದ್ರಾವತಿ: ಸದ್ಯ ಕನ್ನಡ ಹಾಗೂ ಸಮಾಜ ವಿಜ್ಞಾನ ಕಲಿಕಾ ವಿಷಯದ ಪುಸ್ತಕ ಪೂರೈಕೆಯಾಗದ ಕಾರಣ ಬುಕ್ ಬ್ಯಾಂಕ್ ಸದ್ಬಳಕೆ ನಡೆದಿದೆ ಎನ್ನುತ್ತಾರೆ ಸಮೂಹ ಸಂಪನ್ಮೂಲ ಕೇಂದ್ರದ ರವಿಕುಮಾರ್.

ಸದ್ಯ ಶಾಲೆಯಲ್ಲಿ ಪಠ್ಯ ವಿಷಯದ ಚಟುವಟಿಕೆ ಆರಂಭವಾಗಿಲ್ಲ. ಇದಕ್ಕೂ ಮುನ್ನ 90 ದಿನಗಳ ಕಾಲ ನಡೆಯಬೇಕಿದ್ದ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಈಗ 45 ದಿನ ಪೂರೈಸಿದ್ದು, ಇನ್ನೂ 45 ದಿನ ಬಾಕಿ ಇದೆ. ಈ ಹಿಂದೆ ಇದು ‘ಬ್ರಿಡ್ಜ್ ಕೋರ್ಸ್’ ಹೆಸರಿನಲ್ಲಿ ನಡೆಯುತ್ತಿತ್ತು ಎಂದು ಹೇಳಿದರು.

‘ಈ ಕಲಿಕಾ ಚೇತರಿಕೆ ಮುಗಿದ ನಂತರ ಸರ್ಕಾರಿ ಶಾಲೆಯಲ್ಲಿ ಪಠ್ಯ ಸಂಬಂಧಿ ವಿಷಯಗಳ ಪಾಠ ಆರಂಭವಾಗಲಿದೆ. ಅಷ್ಟರಲ್ಲಿ ಎರಡು ವಿಷಯದ ಪಠ್ಯಗಳು ಬರುವುದರಿಂದ ಯಾವುದೇ ಸಮಸ್ಯೆ ಇಲ್ಲ’ ಎನ್ನುವರು ರವಿಕುಮಾರ್‌.

‘ನಮ್ಮಲ್ಲಿ ಬುಕ್ ಬ್ಯಾಂಕ್ ಬಳಕೆ ಮಾಡಿಕೊಡುವ ಕೆಲಸ ನಡೆದಿದೆ. ವಿಶೇಷವಾಗಿ ಪರಿಷ್ಕರಣೆ ನಂತರ ಬರುವ ಪಠ್ಯದಲ್ಲಿನ ವಿಷಯಗಳ ಹೊರತಾಗಿ ಬೇರಾವುದೇ ವಿಷಯಗಳ ಪಠ್ಯಕ್ಕೆ ತೊಂದರೆ ಇಲ್ಲ. ಹಾಗಾಗಿ ಬೋಧನಾ ಚಟುವಟಿಕೆ ನಡೆದಿದೆ’ ಎನ್ನುತ್ತಾರೆ ಹಿರಿಯ ಪ್ರಾಧ್ಯಾಪಕ ದಿವಾಕರ್.

‘ಸರ್ಕಾರಿ ಶಾಲೆಯ ವಿವಿಧ ರೀತಿಯ ಚಟುವಟಿಕೆ ನಮ್ಮ ಮಕ್ಕಳ ಬದುಕಿಗೆ ಸಾಕಷ್ಟು ನೆರವಾಗಿದೆ. ಸದ್ಯ ಪಠ್ಯಕ್ಕೆ ಹೊರತಾಗಿ (ಕೋವಿಡ್ ಕಾರಣ) ಕಲಿಯಲು ಸಾಧ್ಯವಾಗದ ಅನೇಕ ಸಂಗತಿಗಳನ್ನು ಕಲಿಕಾ ಚೇತರಿಕೆ ಮೂಲಕ ತಿಳಿಸಿಕೊಡುವ ಪ್ರಯತ್ನ ನಡೆದಿದೆ. ಈ ಕುರಿತು ನಮಗೂ ಮಾಹಿತಿ ನೀಡಲಾಗಿದೆ’ ಎನ್ನುತ್ತಾರೆ ಪಾಲಕರಾದ ಶ್ರೀಲಕ್ಷ್ಮೀ.

ಸಮಾಜ ವಿಜ್ಞಾನ, ಕನ್ನಡ ಪುಸ್ತಕ ಕೊಡಿ

ತುಮರಿ: ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯ ಪುಸ್ತಕ ಅಲಭ್ಯತೆಯಿಂದ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.

ಕಳೆದೆರಡು ವರ್ಷಗಳಿಂದ ನಿರಂತರವಾಗಿ ಭೌತಿಕ ತರಗತಿಗಳು ನಡೆಯದ ಕಾರಣ ಈ ವರ್ಷ ‘ಕಲಿಕಾ ಚೇತರಿಕೆ’ ವರ್ಷ ಆಚರಿಸುತ್ತಿದ್ದು, ಕರೂರು ಬಾರಂಗಿ ಹೋಬಳಿಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.

ಕರೂರು ಹೋಬಳಿಯ ಕಟ್ಟಿನಕಾರು, ಬ್ಯಾಕೋಡು, ನೆಲ್ಲಿಬೀಡು, ತುಮರಿ ಕ್ಲಸ್ಟರ್ ವ್ಯಾಪ್ತಿಯ 48 ಪ್ರಾಥಮಿಕ ಹಾಗೂ 3 ಪ್ರೌಢಶಾಲೆಗಳಿಗೆ ಇನ್ನೂ ಕನ್ನಡ ಹಾಗೂ ಸಮಾಜ ವಿಜ್ಞಾನ ಪಠ್ಯಪುಸ್ತಕ ಸಿಗದ್ದರಿಂದ ವಿದ್ಯಾರ್ಥಿಗಳಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ.

ಅಲ್ಲದೆ ಮನೋ ವಿಕಸನ ಹಾಗೂ ತಾಂತ್ರಿಕ ಜ್ಞಾಪಕ ಶಕ್ತಿ ಕುಂಠಿತದ ಆತಂಕ ಇಲ್ಲಿನ ಪಾಲಕರಿಗೆ ಎದುರಾಗಿದೆ.

ಹಿಂದಿನ ಪಠ್ಯಕ್ರಮವನ್ನೇ ಮುಂದುವರಿಸಬೇಕಿತ್ತು. ಅವುಗಳಲ್ಲಿ ಗದ್ಯ– ಪದ್ಯ ಎಲ್ಲವೂ ಚೆನ್ನಾಗಿವೆ. ಶಿಕ್ಷಕರು ಬೋಧನೆ ಮಾಡುವಾಗ ಅವರ ಕೈಯಲ್ಲಿ ಪಠ್ಯಪುಸ್ತಕ ಇದ್ದರೆ ಅರ್ಥವಾಗುತ್ತದೆ. ಆದರೆ, ಸಮಾಜ ವಿಜ್ಞಾನ, ಕನ್ನಡ ಪುಸ್ತಕ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಬೇಸಿಗೆ ರಜೆಯಲ್ಲಿ ಪರಿಷ್ಕರಣೆ ಕಾರ್ಯ ಮುಗಿಸಿ, ಶಾಲೆ ಪ್ರಾರಂಭವಾಗುವ ಸಮಯಕ್ಕೆ ಪುಸ್ತಕ ನೀಡಿದ್ದರೆ ಸಹಕಾರಿಯಾಗುತ್ತಿತ್ತು. ನಾಲ್ಕೈದು ದಿನಗಳಲ್ಲಿ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯ ನೀಡಬೇಕು ಇಲ್ಲದಿದ್ದರೆ ಕಷ್ಟವಾಗಲಿದೆ ಎಂಬುದು ದ್ವೀಪದ ವಿದ್ಯಾರ್ಥಿಗಳ ಅಳಲು.

* ಕನ್ನಡ, ಸಮಾಜ ವಿಜ್ಞಾನ ಪಠ್ಯಪುಸ್ತಕ ಬರಬೇಕಿದೆ. ಉಳಿದ ಪಠ್ಯಪುಸ್ತಕಗಳನ್ನು ಪೂರೈಕೆ ಆಧರಿಸಿ ಶಾಲೆಗಳಿಗೆ ಕಳುಹಿಸಿಕೊಡುತ್ತಿದ್ದೇವೆ.

-ಆರ್.ಪರಮೇಶ್ವರಪ್ಪ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.