ADVERTISEMENT

ಪ್ರತ್ಯೇಕ ದಸರಾ ಉತ್ಸವ: ಸರ್ವಾಧಿಕಾರಿ ಧೋರಣೆ

ಕುಮಾರ್ ಬಂಗಾರಪ್ಪ ವಿರುದ್ಧ ರೇಣುಕಾಂಬ ಸೇವಾ ಸಮಿತಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 4:17 IST
Last Updated 18 ಅಕ್ಟೋಬರ್ 2022, 4:17 IST

ಶಿವಮೊಗ್ಗ: ‘ಇಲ್ಲಿಯ ಚಂದ್ರಗುತ್ತಿ ದೇವಸ್ಥಾನದಲ್ಲಿ ಪ್ರತ್ಯೇಕ ದಸರಾ ಉತ್ಸವ ಆಚರಿಸುವ ಮೂಲಕ ಶಾಸಕ ಕುಮಾರ್ ಬಂಗಾರಪ್ಪ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ. ಅಲ್ಲದೇ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಚಂದ್ರಗುತ್ತಿ ರೇಣುಕಾಂಬ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ ದೂರಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸ್ಥಳೀಯವಾಗಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಮುಜರಾಯಿ ಇಲಾಖೆಯ ಅನುಮತಿ ಪಡೆಯದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ಸ್ಥಳೀಯರನ್ನು ಒಡೆದು ಆಳುವ ಕೆಲಸ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇವಸ್ಥಾನ ಸಮಿತಿಯು 2016ರಿಂದ ಊರಿನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನವರಾತ್ರಿ ಉತ್ಸವ ಮಾಡುತ್ತಿತ್ತು. ಇದರಲ್ಲಿ ಸರ್ವ ಸಮುದಾಯದವರು ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ಸಮಿತಿಯವರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಶಾಸಕರು ಏಕಾಏಕಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದೂ ಅಲ್ಲದೇ ಟ್ರ್ಯಾಕ್ಟರ್ ಮೇಲೆ ಪಲ್ಲಕ್ಕಿ ಮೆರವಣಿಗೆ ಮಾಡಿ ದೇವಸ್ಥಾನದ ಸಂಪ್ರದಾಯವನ್ನು ಗಾಳಿಗೆ ತೂರಿದ್ದಾರೆ’ ಎಂದು ಹೇಳಿದರು.

ADVERTISEMENT

‘ದೇವರ ಉತ್ಸವ ಹೇಗಿರಬೇಕು ಎಂಬುದನ್ನು ಆಗಮಶಾಸನದಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ಪಲ್ಲಕ್ಕಿಯಲ್ಲಿ ದೇವಿಯ ಮೆರವಣಿಗೆ ಮಾಡುವುದು ಸಂಪ್ರದಾಯ. ಅಂದು ಹಣ್ಣುಕಾಯಿ ಮಾಡಿಸಿದ ಭಕ್ತರು ಪಲ್ಲಕ್ಕಿ ಬರುವ ಮಾರ್ಗದಲ್ಲಿ ಮಲಗುತ್ತಾರೆ. ಹೀಗೆ ಮಲಗಿದ ಭಕ್ತರನ್ನು ದಾಟಿಕೊಂಡು ಪಲ್ಲಕ್ಕಿ ಮುಂದೆ ಹೋಗಲಿದೆ. ಆದರೆ, ಈ ಬಾರಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿದ್ದರಿಂದ ಇದಕ್ಕೆ ಅವಕಾಶವಾಗಿಲ್ಲ. ಇದು ಭಕ್ತರಿಗೆ ನೋವು ತಂದಿದೆ’ ಎಂದರು.

‘ಮಂಗಳಾರತಿ ಆದ ತಕ್ಷಣ ದೇವಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಶಾಸಕರು ಪಾಲ್ಗೊಳ್ಳುವ ಸಲುವಾಗಿಯೇ ಸಲಾಂ ಕಟ್ಟೆಯಲ್ಲಿ ದೇವಿಯನ್ನು ಮೂರು ತಾಸು ಕಾಯಿಸಲಾಯಿತು. ಇದು ಭಕ್ತರಿಗೆ ತೀವ್ರ ನೋವು ತಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮುಜರಾಯಿ ಇಲಾಖೆ ಆಯುಕ್ತರು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಿ’ ಎಂದು ಒತ್ತಾಯಿಸಿದರು.

‘ಬನ್ನಿ ಮುಡಿಯಲು ಹೋದ ಸಮಿತಿಯ 11 ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಶಾಸಕರನ್ನು ಕೇಳಿ ಪೂಜೆ ಮಾಡಬೇಕು. ಭಜನೆ ಮಾಡಬೇಕು. ಮೆರವಣಿಗೆ ನಡೆಸಬೇಕು ಎಂಬ ಧೋರಣೆ ತೋರಿದ್ದಾರೆ’ ಎಂದರು.

ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಮಾತನಾಡಿ, ಪಂಚಾಯಿತಿ ಜಾಗದಲ್ಲಿ ಅನುಮತಿ ಇಲ್ಲದೇ ಶಾಮಿಯಾನ ಹಾಕಿ ಕಾರ್ಯಕ್ರಮ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ರೇಣುಕಾ ಪ್ರಸಾದ್, ನಾಗರಾಜ್ ಇದ್ದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ಯು ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಸಂಪರ್ಕಿಸಿದ್ದು, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.