
ಎಸ್.ಜಿ.ನಂಜಯ್ಯನಮಠ
ಶಿವಮೊಗ್ಗ: ‘ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲೂ ವಿಮಾನ ಇಳಿಸುವ (ನೈಟ್ ಲ್ಯಾಂಡಿಂಗ್) ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರ ಕಾಮಗಾರಿ ಈ ತಿಂಗಳ ಅಂತ್ಯಕ್ಕೆ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ₹ 6 ಕೋಟಿ ಅನುದಾನ ಮಂಜೂರು ಮಾಡಿದೆ’ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
‘ಕಾಮಗಾರಿ ಪೂರ್ಣಗೊಂಡು ಮುಂದಿನ ಆರು ತಿಂಗಳಲ್ಲಿ ವಿಮಾನಗಳ ನೈಟ್ ಲ್ಯಾಂಡಿಂಗ್ ಶುರುವಾಗಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಹಿಂದೆ ಕೆಲವು ತಾಂತ್ರಿಕ ತೊಂದರೆ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಂದ ವಿಮಾನ ನಿಲ್ದಾಣದ ಪರವಾನಗಿ ನವೀಕರಣ ಪ್ರಕ್ರಿಯೆ ಬಾಕಿ ಉಳಿದಿತ್ತು. ಈಗ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ. ಬಾಕಿ ಇದ್ದ ₹22 ಲಕ್ಷ ದಂಡವನ್ನೂ ಪಾವತಿಸಲಾಗಿದೆ. ಆದ್ದರಿಂದ ಮುಂದಿನ ಮೂರು ವರ್ಷಗಳವರೆಗೆ ಪರವಾನಗಿ ನವೀಕರಿಸುವ ಪ್ರಮೇಯ ಎದುರಾಗುವುದಿಲ್ಲ’ ಎಂದರು.
‘ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದ ವಿಮಾನಗಳು ಇಳಿಯದೇ ವಾಪಸ್ ಹೋಗುತ್ತಿವೆ. ಅದನ್ನು ತಪ್ಪಿಸಲು ರಾತ್ರಿ ಸಂಚಾರಕ್ಕೆ ಮತ್ತು ಸರಕು ಸಾಗಣೆಗೆ ಅನುಕೂಲ ಕಲ್ಪಿಸಲು ಅಗತ್ಯವಿರುವ ದಿಕ್ಸೂಚಿ ಯಾಂತ್ರಿಕ ವ್ಯವಸ್ಥೆ (ಡಿಬಿಒಆರ್)ಗೆ ಟೆಂಡರ್ ಪ್ರಕ್ರಿಯೆ ಹಾಗೂ ವಿದ್ಯುತ್ ಸಂಪರ್ಕ ವ್ಯವಸ್ಥೆಯೂ ಪೂರ್ಣಗೊಂಡಿದೆ’ ಎಂದು ಹೇಳಿದರು.
‘ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿಯಮಾನುಸಾರ ಸದರಿ ಪ್ರದೇಶದ ಮಣ್ಣನ್ನು ಗುಣಮಟ್ಟದ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನೊಂದು ವಾರದಲ್ಲಿ ವರದಿ ಬರುವ ನಿರೀಕ್ಷೆ ಇದೆ. ಈ ಎಲ್ಲಾ ಕಾಮಗಾರಿಗಳ ಪರಿಶೀಲನೆಗಾಗಿ ಖುದ್ದಾಗಿ ಬರುವೆ’ ಎಂದು ತಿಳಿಸಿದರು.
‘ವಿಮಾನ ನಿಲ್ದಾಣದಲ್ಲಿ ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಈ ಹಿಂದೆ ಖಾಸಗಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಯಾವುದೇ ಕಂಪನಿಗಳು ಆಸಕ್ತಿ ತೋರಿಲ್ಲ. ಆದಾಗ್ಯೂ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗುವುದು’ ಎಂದರು.
ಸಭೆಯಲ್ಲಿ ವಿಮಾನ ನಿಲ್ದಾಣದ ಮುಖ್ಯಸ್ಥ ಕ್ಯಾಪ್ಟನ್ ಶಮಂತ್, ವಿದ್ಯಾಧರ ಸಾಲಿಮಠ್, ಎಚ್.ಸಿ.ಯೋಗೀಶ್ ಉಪಸ್ಥಿತರಿದ್ದರು.
ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕಾಯ್ದಿರಿಸಿರುವ 17 ಎಕರೆ ಜಾಗದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ಮತ್ತು ಪಂಚತಾರಾ ಹೊಟೇಲ್ ನಿರ್ಮಿಸಲು ಉದ್ದೇಶಿಸಿದ್ದು, ಶೀಘ್ರ ನಿರ್ಣಯ ಕೈಗೊಳ್ಳಲಾಗುವುದುಎಸ್.ಜಿ.ನಂಜಯ್ಯನಮಠ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ಉಡಾನ್ ಮುಂದುವರಿಕೆ; ಕೇಂದ್ರಕ್ಕೆ ಮನವಿ
ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್, ಗೋವಾಕ್ಕೆ ಪ್ರಯಾಣಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ವಿಮಾನದ ಪ್ರಯಾಣ ದರದಲ್ಲಿ ರಿಯಾಯಿತಿ ನೀಡುವ ಕೇಂದ್ರ ಸರ್ಕಾರದ ‘ಉಡಾನ್’ ಯೋಜನೆಯ ಅವಧಿ ಶೀಘ್ರ ಮುಕ್ತಾಯಗೊಳ್ಳಲಿದೆ.
‘ಪ್ರಯಾಣಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ‘ಉಡಾನ್’ ಯೋಜನೆ ಮುಂದುವರೆಸುವಂತೆ ಶಿವಮೊಗ್ಗ ಸಂಸದರ ಮೂಲಕ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ನಂಜಯ್ಯನಮಠ ತಿಳಿಸಿದರು.
‘ಸಿಎಂ ಭೇಟಿ ಮಾಡಿ ಅನುದಾನ ಕೊಡಿಸುವೆ’
‘ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಭೂಮಿ ನೀಡಿದ್ದ 370 ರೈತರ ಕುಟುಂಬಗಳಿಗೆ ತಲಾ ಒಂದು ನಿವೇಶನ ಕೊಡುವ ಅಂದಿನ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ನ್ಯಾಯಾಲಯ ಸಂತ್ರಸ್ತರ ಪರವಾಗಿ ತೀರ್ಪು ನೀಡಿರುವುದು ಗಮನಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಿವೇಶನ ಒದಗಿಸಲು ಅಗತ್ಯವಿರುವ ಅನುದಾನ ಕೊಡಿಸುವೆ’ ಎಂದು ನಂಜಯ್ಯನಮಠ ಭರವಸೆ ನೀಡಿದರು.
‘ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಭೂಮಿ ನೀಡಿದ್ದ 370 ರೈತರ ಕುಟುಂಬಗಳಿಗೆ ತಲಾ ಒಂದು ನಿವೇಶನ ಕೊಡುವ ಅಂದಿನ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ನ್ಯಾಯಾಲಯ ಸಂತ್ರಸ್ತರ ಪರವಾಗಿ ತೀರ್ಪು ನೀಡಿರುವುದು ಗಮನಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಿವೇಶನ ಒದಗಿಸಲು ಅಗತ್ಯವಿರುವ ಅನುದಾನ ಕೊಡಿಸುವೆ’ ಎಂದು ನಂಜಯ್ಯನಮಠ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.