ADVERTISEMENT

ಸರ್ಕಾರದಿಂದ ನೆರವು, ವೈಯಕ್ತಿಕ ₹5 ಲಕ್ಷ ದೇಣಿಗೆ: ಸಚಿವ ಮಧು ಬಂಗಾರಪ್ಪ

ಕಸಾಪ ಭವನದ ಮುಂದುವರಿದ ಕಾಮಗಾರಿ: ಸಚಿವ ಮಧು ಬಂಗಾರಪ್ಪ ಘೋಷಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 12:58 IST
Last Updated 6 ಫೆಬ್ರುವರಿ 2025, 12:58 IST
ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ಗುರುವಾರ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು
ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ಗುರುವಾರ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು    

ಶಿವಮೊಗ್ಗ: ಇಲ್ಲಿನ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ನಿರ್ಮಿಸಿರುವ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಕಟ್ಟಡದ ಮುಂದುವರಿದ ಕಾಮಗಾರಿಗೆ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ಕಲ್ಪಿಸುವ ಜೊತೆಗೆ ವೈಯಕ್ತಿಕವಾಗಿ ₹ 5 ಲಕ್ಷ ಕೊಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಘೋಷಿಸಿದರು.

ಸಾಹಿತ್ಯ ಗ್ರಾಮದಲ್ಲಿ ಗುರುವಾರ ಜಿಲ್ಲಾ ಮಟ್ಟದ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆಯ ಪ್ರತೀಕ. ಕನ್ನಡದ ಉಳಿವು, ವಿಕಾಸಕ್ಕೆ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದಕ್ಕೆ ಎಲ್ಲ ಅಗತ್ಯ ಸಹಕಾರ ನೀಡಲಾಗುವುದು’ ತಿಳಿಸಿದ ಅವರು, ‘ಕನ್ನಡದ ನೆಲ, ಜಲ, ಭಾಷೆಯ ಉಳಿವಿನ ಕಾರ್ಯಕ್ರಮಗಳು ನಿರಾತಂಕವಾಗಿ ಮುಂದುವರಿಯಲಿ ಎಂದು ಆಶಿಸಿದರು.

ADVERTISEMENT

‘ಈ ನೆಲದ ಶ್ರೀಮಂತ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ಜನಪದ ಪ್ರಕಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆ. ವಿಶೇಷವಾಗಿ ಕನ್ನಡದ ಪ್ರತಿ ಕಾರ್ಯಕ್ರಮಗಳು ಹಬ್ಬದ ಸಂಭ್ರಮದಲ್ಲಿ ಮೈದಳೆಯಬೇಕು’ ಎಂದು ಹೇಳಿದರು.

‘ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಲವು ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಆದರೂ ಕನ್ನಡ ಕಲಿಕೆ ಕಡ್ಡಾಯ. ಕನ್ನಡ ಮಾಧ್ಯಮ ನಿರಂತರವಾಗಿರಲಿದೆ. ಹಿರಿಯ ಸಾಹಿತಿ ನಾ.ಡಿಸೋಜ ಅವರು ಭಾಷೆಗೆ ನೀಡಿದ ಕೊಡುಗೆ ಅಪಾರ. ಅವರನ್ನು ಈ ಹೊತ್ತಿನಲ್ಲಿ ನೆನೆಯವುದು ಎಲ್ಲರ ಕರ್ತವ್ಯ. ಕುವೆಂಪು ವಿಶ್ವವಿದ್ಯಾಲಯದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಹೇಳಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ನೆನಪಿಸಿಕೊಂಡರು.

ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ ಆಶಯ ನುಡಿಗಳನ್ನಾಡಿದರು. ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಸಮ್ಮೇಳನಾಧ್ಯಕ್ಷ ಜೆ.ಕೆ.ರಮೇಶ್‌, ನಿಕಟ ಪೂರ್ವ ಅಧ್ಯಕ್ಷ ಎಸ್.ಪಿ.ಪದ್ಮಪ್ರಸಾದ್‌, ಸಾಹಿತಿ ಬಿ.ಚಂದ್ರೇಗೌಡ ಉಪಸ್ಥಿತರಿದ್ದರು.

ಶಿವಮೊಗ್ಗದ ಸಾಹಿತ್ಯ ಗ್ರಾಮದ ಸಮ್ಮೇಳನ ಸಭಾಂಗಣದಲ್ಲಿ ಸೇರಿದ್ದ ಸಾಹಿತ್ಯಾಸಕ್ತರು
ಶಿವಮೊಗ್ಗದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳದಲ್ಲಿ ಆಯೋಜಿಸಿರುವ ‘ಪ್ರಜಾವಾಣಿ’ ಛಾಯಾಗ್ರಾಹ ಶಿವಮೊಗ್ಗ ನಾಗರಾಜ್ ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ಸಚಿವ ಮಧು ಬಂಗಾರಪ್ಪ ವೀಕ್ಷಿಸಿದರು

ನಿರಂತರ ಬಳಕೆಯಿಂದ ಮಾತ್ರ ಭಾಷೆ ಉಳಿವು: ಜೆ.ಕೆ.ರಮೇಶ್

ಶಿವಮೊಗ್ಗ: ‘ಕನ್ನಡ ಭಾಷೆಗೆ ಆತಂಕ ಎದುರಾಗಿದೆ. ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲ ಹಂತಗಳಲ್ಲಿಯೂ ಕನ್ನಡವನ್ನು ಹೊರದಬ್ಬಲಾಗುತ್ತಿದೆ. ಕನ್ನಡ ಎಲ್ಲಿದೆ ಎಂದು ಶೋಧಿಸಬೇಕಾದ ಹೊತ್ತು ಈಗ ಬಂದಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಿ.ಕೆ.ರಮೇಶ್ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಸಾಹಿತ್ಯ ಗ್ರಾಮದಲ್ಲಿ ಗುರುವಾರ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ನುಡಿಗಳನ್ನಾಡಿದ ಅವರು ‘ಕನ್ನಡ ಭಾಷೆ ಎರಡು ಸಾವಿರ ವರ್ಷಗಳಷ್ಟು ಹಳೆಯದು. ಆದರೆ ಅದು ಈಗ ಸೊರುಗುತ್ತಿದೆ. ವಿಸ್ತಾತರಗೊಳ್ಳಬೇಕಾದ ಭಾಷೆ ನಿರಾಶದಾಯಕ ಸ್ಥಿತಿ ತಲುಪಿದೆ. ನಾವೇ ಕನ್ನಡವನ್ನು ಕೊಲ್ಲುತ್ತಿದ್ದೇವೆ ಅನ್ನಿಸುತ್ತಿದೆ. ಜಗತ್ತಿನಲ್ಲಿ ಅಳಿಯುತ್ತಿರುವ ಭಾಷೆಗಳಲ್ಲಿ ಕನ್ನಡ ಸೇರಬಾರದು. ಅದು ಮುಂದಿನ ಪೀಳಿಗೆಗೆ ಪಳೆಯುಳಿಕೆಯಂತಾಗಬಾರದು. ಕನ್ನಡಿಗರು ಆ ಎಚ್ಚರ ವಹಿಸಬೇಕಿದೆ’ ಎಂದರು.

‘ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮವಾಗಿ ಒಂದು ಭಾಷೆಯಾಗಿ ಕಲಿಸುವುದು ಸಾಧ್ಯವಾಗದೆ ಶಾಲೆಗಳೇ ಮುಚ್ಚಿ ಹೋಗುತ್ತಿವೆ. ವ್ಯಾವಹಾರಿಕ ಜಗತ್ತಿನಲ್ಲಿಯೂ ಕನ್ನಡ ಯಾರಿಗೂ ಬೇಕಾಗಿಲ್ಲ. ವ್ಯಾಪಾರಿಗೆ ಭಾಷೆಯ ಹಂಗೇನು ಎಂಬಂತಾಗಿದೆ ಕನ್ನಡದ ಪರಿಸ್ಥಿತಿ’ ಎಂದು ಹೇಳಿದರು.

‘ರಾಜ್ಯದಲ್ಲಿ ಹೆಸರಿಗೆ ಮಾತ್ರ ಕನ್ನಡ ಆಡಳಿತ ಭಾಷೆ. ಇಲ್ಲಿರುವ ಅಧಿಕಾರಿ ಶಾಹಿ ನೌಕರ ಶಾಹಿಗೆ ಕನ್ನಡವೇ ಬೇಕಾಗಿಲ್ಲ. ಇನ್ನೂ ಆಳುವ ರಾಜಕಾರಣಿಗಳಿಗೆ ಭಾಷೆ ಲೆಕ್ಕಕ್ಕೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಭಾಷೆ ಮತ ತಂದುಕೊಡುವ ಶಕ್ತಿ ಹೆಚ್ಚಿಸಿಕೊಂಡಿಲ್ಲ. ಕನ್ನಡದ ಬಗ್ಗೆ ಬದ್ಧತೆ ಇರುವ ಮಂತ್ರಿಯಾಗಲೇ ಶಾಸಕರಾಗಲೀ ಕರ್ನಾಟಕದಲ್ಲಿ ಇಲ್ಲವೇ ಇಲ್ಲ. ಶಾಸನ ಸಭೆಯಲ್ಲಿ ಗಟ್ಟಿಧ್ವನಿಯಲ್ಲಿ ಮಾತನಾಡುತ್ತಿದ್ದ ಶಾಂತವೇರಿ ಗೋಪಾಲಗೌಡರು ಕೋಣಂದೂರು ಲಿಂಗಪ್ಪ ಎಸ್‌.ನಿಜಲಿಂಗಪ್ಪ ಅವರಂತಹ ಜನಪ್ರತಿನಿಧಿಗಳನ್ನು ಈಗ ನೋಡಲು ಸಾಧ್ಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರಿ ಕಚೇರಿಗಳು ಬ್ಯಾಂಕ್ ಅಂಚೆ ರೈಲು ವಿಮಾನ ನಿಲ್ದಾಣಗಳಲ್ಲಿ ಅನ್ಯ ಭಾಷೆಗಳದ್ದೇ ಕಾರುಬಾರು. ನಮ್ಮವರೇ (ಕನ್ನಡಿಗರು) ಇದ್ದರೂ ಕನ್ನಡ ಬಳಸುವುದಿಲ್ಲ. ಇಂಗ್ಲಿಷ್‌ ಕನ್ನಡಿಗರ ದೊರೆಯಾಗಿ ರಕ್ತದಲ್ಲೇ ಸೇರಿಕೊಂಡಿದೆ. ಈ ನಡುವೆ ಹಿಂದಿ ಎದುರಿಸಬೇಕಾದ ದೊಡ್ಡ ಸವಾಲು ನಮ್ಮ ಮುಂದೆ ಇದೆ. ಇಂಗ್ಲಿಷ್ ಹಿಂದಿ ಭಾಷೆಗಳು ವಿಜೃಂಭಿಸುತ್ತಿರುವಾಗ ಕನ್ನಡವನ್ನು ಉಳಿಸುವವರು ಯಾರು? ಬರೀ ಸಾಹಿತ್ಯದಿಂದ ಕನ್ನಡ ಉಳಿಯುವುದಿಲ್ಲ. ಭಾಷೆಯನ್ನು ನಿರಂತರವಾಗಿ ಬಳಸುವವರು ಬೇಕು. ಈ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು’ ಎಂದರು.

‘ಒಕ್ಕೂಟ ರಾಷ್ಟ್ರದ ಅಂಗವಾಗಿ ಕರ್ನಾಟಕ ಬೆಳಗಬೇಕಿದೆ. ಕನ್ನಡದ ಜನತೆ ನೆಮ್ಮದಿಯ ಬದುಕನ್ನು ಕಾಣಬೇಕಾಗಿದೆ. ದ್ವೇಷ ಅಸೂಯೆ ಕ್ರೌರ್ಯಗಳು ನಿಲ್ಲಬೇಕಿದೆ. ಶಾಂತಿ ಸಾಮರಸ್ಯ ಮತ್ತೆ ಮತ್ತೆ ಬೇಕಾಗಿದೆ. ಕನ್ನಡ ಇದೆಲ್ಲದಕ್ಕೂ ಮದ್ದಾಗಲಿ’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.