ADVERTISEMENT

ಶಿವಮೊಗ್ಗ: ಆಯುಧ ಪೂಜೆಗೆ ಸಿದ್ಧತೆ, ಹೂವು, ಕುಂಬಳ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 8:08 IST
Last Updated 1 ಅಕ್ಟೋಬರ್ 2025, 8:08 IST
ದಸರಾ ಆಚರಣೆ ಹಾಗೂ ಆಯುಧ ಪೂಜೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಮಂಗಳವಾರ ಹೂವು ಮಾರಾಟದ ಭರಾಟೆ ಜೋರಾಗಿತ್ತು
ದಸರಾ ಆಚರಣೆ ಹಾಗೂ ಆಯುಧ ಪೂಜೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಮಂಗಳವಾರ ಹೂವು ಮಾರಾಟದ ಭರಾಟೆ ಜೋರಾಗಿತ್ತು   

ಶಿವಮೊಗ್ಗ: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಗರಿಗೆದರಿದೆ. ಹೀಗಾಗಿ ಪೂಜೆಗೆ ಅಗತ್ಯ ಹೂವು-ಹಣ್ಣು, ಬೂದುಗುಂಬಳ ಖರೀದಿಯ ಭರಾಟೆ ಮಾರುಕಟ್ಟೆಯಲ್ಲಿ ಮಂಗಳವಾರ ಜೋರಾಗಿತ್ತು. 

ನವರಾತ್ರಿ ಆಚರಣೆಯ ವೇಳೆ ಪ್ರತಿ ವರ್ಷ ಹೂವುಗಳ ದರ ಏರಿಕೆ ಆಗುತ್ತದೆ. ಆದರೆ, ಕೆಲ ದಿನಗಳ ಹಿಂದೆ ಹೂವಿನ ದರ ಕುಸಿದಿತ್ತು. ಹಬ್ಬದ ವೇಳೆಗೆ ಮತ್ತೆ ಹೂವಿನ ದರ ಹೆಚ್ಚಾಗಿದೆ. ಎರಡು ವಾರಗಳವರೆಗೆ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಈ ಸಮಯದಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಬಂದಿದೆ. 

ದಸರಾ ಹಬ್ಬದಲ್ಲಿ ಚಂಡು ಹೂ, ಸೇವಂತಿಗೆ, ಕನಕಾಂಬರ, ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆಯುಧ ಪೂಜೆ ದಿನ ವಾಹನ, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುವುದರಿಂದ ಹೂವಿನ ಬೇಡಿಕೆಯೂ ಹೆಚ್ಚಾಗಿದೆ.  

ADVERTISEMENT

ಪ್ರತಿ ಕೆ.ಜಿ ಕನಕಾಂಬರ ₹500, ಮಲ್ಲಿಗೆ ₹600, ಗುಲಾಬಿ ₹400, ಸೇವಂತಿಗೆ ₹ 400 ರಂತೆ ಮಾರಾಟವಾಗುತ್ತಿವೆ. ಆಯುಧ ಪೂಜೆಯ ದಿನ ಬಳಕೆಗೆ ಬೂದುಗುಂಬಳ ಪ್ರತಿ ಕೆ.ಜಿಗೆ ₹ 40ರಿಂದ ಆರಂಭಗೊಂಡು ಗಾತ್ರದ ಆಧಾರದ ಮೇಲೆ ಒಂದಕ್ಕೆ ₹100- 200ರ ವರೆಗೆ ಮಾರಾಟವಾದವು. 

ನಗರದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರು ರಸ್ತೆ, ಬಿ.ಎಚ್. ರಸ್ತೆ, ಪೊಲೀಸ್ ಚೌಕಿ, ಗೋಪಾಳ, ವಿನೋಬನಗರ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ದಿನಸಿ, ಆಲಂಕಾರಿಕ ವಸ್ತುಗಳು ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿಯ ಖರೀದಿ ಜೋರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.