
ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ‘ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಸಿ.ಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಒಳಜಗಳಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ’ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದರು.
‘ಸಿ.ಎಂ ಸ್ಥಾನದ ಗೊಂದಲದಲ್ಲಿ ಮುಳುಗಿದ್ದು, ನಾಯಕರು ತಮ್ಮ ಹಿಂಬಾಲಕರ ಮೂಲಕ ಪರಸ್ಪರ ಹೇಳಿಕೆ ನೀಡುತ್ತಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಯತೀಂದ್ರ ಅವರು ಮುಂದಿನ ಐದು ವರ್ಷಗಳ ಸಿ.ಎಂ ಎಂದು ಒಬ್ಬರು ಹೇಳಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಯತೀಂದ್ರರೇ ನಮ್ಮ ಹೈಕಮಾಂಡ್ ಎಂದು ಹೇಳುವ ಮಟ್ಟಕ್ಕೆ ನಾಟಕದ ಗೊಂದಲದಲ್ಲಿ ರಾಜ್ಯದ ಜನರಿಗೆ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ’ ಎಂದು ಆರೋಪಿಸಿದರು.
‘ಹೈಕಮಾಂಡ್ ಆಟದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಕೈಎತ್ತಿರುವಂತಾಗಿದೆ. ಹಾಗಾದರೆ ಹೈಕಮಾಂಡ್ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಗೊಂದಲದ ಹೇಳಿಕೆಗಳನ್ನು ನಿಲ್ಲಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೆಲಸ ಮಾಡಲು ಸರ್ಕಾರ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿರುವ ಗುತ್ತಿಗೆದಾರರು ಟೆಂಡರ್ ಹಾಕಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಂತಹ ಗೌರವಾನ್ವಿತ ಸಭೆಗಳಲ್ಲಿ ಶಾಸಕರ ಪದ ಬಳಕೆ ಮೌಲ್ಯ ಕಳೆದುಕೊಂಡಿರುವುದು ನೋವು ತಂದಿದೆ. ಇಂತಹ ಸ್ಥಿತಿಯಲ್ಲೂ ಸಚಿವರು ಮೌನವಾಗಿರುವುದು ಅಚ್ಚರಿ ಮೂಡಿಸಿದೆ’ ಎಂದರು.
‘ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಲ್ಲಿ ಸರ್ಕಾರ ಉದ್ದೇಶಪೂರ್ವಕ ವಿಳಂಬ ಮಾಡುತ್ತಿದೆ. ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಯಾಗಿದ್ದು, ಇದು ರಾಷ್ಟ್ರಭಕ್ತರ ಬಳಗಕ್ಕೆ ಸಿಕ್ಕ ಜಯವಾಗಿದೆ’ ಎಂದು ಮುಖಂಡ ಕೆ.ಇ. ಕಾಂತೇಶ್ ತಿಳಿಸಿದರು.
ವಿಶ್ವಾಸ್, ಮೋಹನ್ ಜಾದವ್, ಲಕ್ಷ್ಮೀಶಂಕರ್ ನಾಯ್ಕ, ಶ್ರೀಕಾಂತ್, ವಾಗೀಶ್, ಶಿವಾಜಿ, ಕುಬೇರಪ್ಪ, ರಾಜು, ದಿನೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.