ಶಿವಮೊಗ್ಗ: ದೇಶವನ್ನು 60 ದಶಕಗಳು ಆಳಿದ ಕಾಂಗ್ರೆಸ್ ಜಾತಿ– ಜಾತಿಗಳ ನಡುವೆ ಬೆಂಕಿ ಹಚ್ಚಿತ್ತು. ಯುಪಿಎ ಸರ್ಕಾರದ ಆಡಳಿತದಲ್ಲಿ ನಡೆದ ಭ್ರಷ್ಟಾಚಾರವನ್ನು ಇನ್ನೂ ಜನರು ಮರೆತಿಲ್ಲ. ಇದಕ್ಕೆ ಪರಿಹಾರವಾಗಿ ಬಿಜೆಪಿಯ ಭ್ರಷ್ಟಾಚಾರ ಮುಕ್ತ ಆಡಳಿತ ಮೂರನೇ ಅವಧಿಗೆ ಕಾಲಿಟ್ಟಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಬಿಜೆಪಿ ಜಿಲ್ಲಾ ಘಟಕದಿಂದ ಇಲ್ಲಿನ ಸರ್ಜಿ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ವಿಕಸಿತ ಭಾರತದ ಅಮೃತ ಕಾಲ’ ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರ್ಕಾರದ 11 ವರ್ಷದ ಸಾಧನೆಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಸಾಧನೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಈ ಕಾರ್ಯಕ್ರಮ ರೂಪಿಸಿದೆ. ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿಯವರು ವಿಕಸಿತ ಭಾರತದ ಹಾದಿಯಲ್ಲಿದ್ದು, ಇದು ಅಮೃತ ಕಾಲ. ಸುಭದ್ರ-ಸದೃಢ ಸರ್ಕಾರ ದೇಶದಲ್ಲಿ ಬಂದಿದೆ. ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆಗಳು ನವಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿದೆ ಎಂದರು.
ರಾಜ್ಯ ಶಿಕ್ಷಣ ಪ್ರಕೋಷ್ಠದ ಸಹಸಂಚಾಲಕ ಎಂ.ಜಿ. ಭಟ್ ಮಾತನಾಡಿ, 2014ರಲ್ಲಿ ಯುಪಿಎ ಸರ್ಕಾರದ ಕೊನೆಯ ಅವಧಿಯಲ್ಲಿ ಹಿಂದೂಗಳ ಸ್ವಾತಂತ್ರ ಹರಣ ಬಿಲ್ ಮಂಡನೆಗೆ ಸಿದ್ಧವಾಗಿತ್ತು. ಕೋಮು ಗಲಭೆಯಾದಲ್ಲಿ ಹಿಂದೂಗಳನ್ನೇ ಟಾರ್ಗೇಟ್ ಮಾಡುವ ಜತೆಗೆ ಅನ್ಯಕೋಮಿನವರಿಂದ ಹಿಂದೂ ಹೆಣ್ಣುಮಕ್ಕಳ ಮೇಲಾದ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವ ಬದಲು ಹಿಂದೂ ಹೆಣ್ಣುಮಕ್ಕಳ ಹೇಳಿಕೆಯನ್ನೇ ತೆಗೆದುಕೊಂಡು ಆಕೆಯನ್ನು ಆರೋಪಿ ಎನ್ನುವ ರೀತಿಯಲ್ಲಿ ಬಿಂಬಿಸುವ ಕಾನೂನು ತರಲು ಯುಪಿಎ ಸರ್ಕಾರ ಹೊರಟಿತ್ತು. ಆದರೆ, ಅದೃಷ್ಟುವಶಾತ್ ಬಿಜೆಪಿ ಆಡಳಿತಕ್ಕೆ ಬಂದಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದರು.
ಇದೇ ವೇಳೆ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಯಾದ ಸೋಮಶೇಖರ್, ಮುದ್ರಾ ಯೋಜನೆಯಡಿ ಮುದ್ರಾ ಫಲಾನುಭವಿ ಗುರುರಾಜ್, ಉಜಾಲ ಯೋಜನೆ ಫಲಾನುಭವಿ ಸರೋಜಮ್ಮ, ರೈತ ಪ್ರವೀಣ್ ಕುಮಾರ್ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎನ್.ಕೆ. ಜಗದೀಶ್, ಮಾಜಿ ಶಾಸಕ ಆರ್.ಕೆ. ಸಿದ್ರಾಮಣ್ಣ, ಮೋಹನ್‌ರೆಡ್ಡಿ, ಎಂ.ಬಿ. ಹರಿಕೃಷ್ಣ, ವಿನ್ಸೆಂಟ್ ರೋಡ್ರಿಗಸ್, ಜ್ಞಾನೇಶ್ವರ್, ಗಣೇಶ್ ಬಿಳಕಿ, ದರ್ಶನ್ ಇದ್ದರು.
ರಾಜ್ಯ ಸರ್ಕಾರ ಜಾತಿ ಜನಗಣತಿಯನ್ನು ರಿ–ಸರ್ವೆ ಮಾಡಲು ಆದೇಶಿಸಿ ಕಾಲಾಹರಣ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ತಲ್ಲೂಕು ಪಂಚಾಯಿತಿ ಮಹಾನಗರ ಪಾಲಿಕೆ ಚುನಾವಣೆಗಳು ನಡೆಯಲಿದ್ದು ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸಬೇಕಾಗಿದೆ. ಅದಕ್ಕಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.