ADVERTISEMENT

ಸಾಗರ | ಅಡಿಕೆಗೆ ಕೊಳೆರೋಗ: ಪರಿಹಾರಕ್ಕೆ ಒತ್ತಾಯ

ವಿವಿಧ ಸಹಕಾರ ಸಂಘಗಳ ಪ್ರಮುಖರಿಂದ ಶಾಸಕ ಬೇಳೂರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 14:27 IST
Last Updated 4 ಸೆಪ್ಟೆಂಬರ್ 2024, 14:27 IST
ಸಾಗರದಲ್ಲಿ ವಿವಿಧ ಸಹಕಾರ ಸಂಸ್ಥೆಗಳ ಪ್ರಮುಖರು ಬುಧವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದರು
ಸಾಗರದಲ್ಲಿ ವಿವಿಧ ಸಹಕಾರ ಸಂಸ್ಥೆಗಳ ಪ್ರಮುಖರು ಬುಧವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದರು   

ಸಾಗರ: ಇಲ್ಲಿನ ವಿವಿಧ ಸಹಕಾರ ಸಂಸ್ಥೆಗಳ ಪ್ರಮುಖರು ಬುಧವಾರ ಅಡಿಕೆಗೆ ಬಂದಿರುವ ಕೊಳೆರೋಗದಿಂದ ನಷ್ಟ ಅನುಭವಿಸಿರುವ ಬೆಳೆಗಾರರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಒತ್ತಾಯಿಸಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದರು.

ಸಾಗರ, ಸೊರಬ, ಹೊಸನಗರ ತಾಲ್ಲೂಕುಗಳಲ್ಲಿ ಈ ವರ್ಷ ಅತಿವೃಷ್ಟಿಯಿಂದಾಗಿ ಶೇ 60ಕ್ಕೂ ಹೆಚ್ಚು ಪ್ರಮಾಣದಲ್ಲಿ ಅಡಿಕೆ ಬೆಳೆಗೆ ಹಾನಿ ಉಂಟಾಗಿದೆ. ಕೊಳೆರೋಗದಿಂದಾಗಿ ಮತ್ತಷ್ಟು ಹೆಚ್ಚಿನ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಕೊಳೆರೋಗ ನಿವಾರಣೆಗೆ ಬೆಳೆಗಾರರು ಎರಡು ಬಾರಿ ಔಷಧ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಡಿಕೆಯ ವಹಿವಾಟನ್ನೆ ಪ್ರಮುಖವಾಗಿ ನಡೆಸುವ ಸಹಕಾರ ಸಂಸ್ಥೆಗಳಿಗೂ ಈ ಬೆಳವಣಿಗೆ ಆತಂಕ ತಂದಿದೆ. ಸರ್ಕಾರ ಕೂಡಲೇ ಬೆಳೆಗಾರರಿಗೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಮನವಿ ಸ್ವೀಕರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ‘ಈಗಾಗಲೇ ತೋಟಗಾರಿಕಾ ಸಚಿವರ ಬಳಿ ಮಲೆನಾಡು ಪ್ರದೇಶದ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿರುವೆ. ಶೀಘ್ರದಲ್ಲೆ ಮುಖ್ಯಮಂತ್ರಿ ಬಳಿ ಕೂಡ ನಿಯೋಗದೊಂದಿಗೆ ತೆರಳಿ ಪರಿಹಾರಕ್ಕೆ ಒತ್ತಾಯಿಸುತ್ತೇನೆ’ ಎಂದು ಭರವಸೆ ನೀಡಿದರು.

ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ತೋಟಗಾರ್ಸ್ ಅಧ್ಯಕ್ಷ ಕೆ.ಸಿ. ದೇವಪ್ಪ, ಮ್ಯಾಮ್ಕೋಸ್ ನಿರ್ದೇಶಕ ದಿನೇಶ್ ಬರದವಳ್ಳಿ, ಪ್ರಮುಖರಾದ ಕೃಷ್ಣಮೂರ್ತಿ, ಶ್ರೀಕಂಠ ಗೌಡ, ಸುರೇಶ್, ರಮೇಶ್ ಎಂ.ಬಿ. ಭಾಸ್ಕರ ಭಟ್, ಸುಬ್ಬಣ್ಣ, ಎಚ್.ಎನ್.ಲಂಬೋದರ್, ಪಿ.ಎಸ್. ಕೃಷ್ಣಮೂರ್ತಿ, ಲೋಕನಾಥ, ಚೇತನ್ ರಾಜ್ ಕಣ್ಣೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.