ಶಿವಮೊಗ್ಗ: ‘ಶಿವಮೊಗ್ಗ ದಸರಾ ಮಹೋತ್ಸವ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ದಸರಾಗೆ ಚಾಲನೆ ನೀಡುವರು’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಮೈಸೂರು ದಸರಾ ಮಾದರಿಯಲ್ಲೇ 11 ದಿನಗಳು ಶಿವಮೊಗ್ಗ ದಸರಾ ಸೊಬಗನ್ನು ಕಣ್ತುಂಬಿಕೊಳ್ಳಬಹುದು. 22ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೆ.23ರಂದು ಮಕ್ಕಳ ದಸರಾ, ಸುಗಮ ಸಂಗೀತ, ಯಕ್ಷ ಸಂಭ್ರಮ ನಡೆಯಲಿದೆ. ಸೆ.24ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ರಂಗಾಯಣದಲ್ಲಿ ರಂಗ ದಸರಾ ನಡೆಯಲಿದೆ. ಚಲನಚಿತ್ರ ನಟರಾದ ಶರಣ್, ಕಾರುಣ್ಯರಾವ್, ಸಾಯಿಪ್ರಕಾಶ್, ರೂಪ ಅಯ್ಯರ್, ಗಣೇಶ್ ಮಂದಾರ್ತಿ ಭಾಗವಹಿಸಲಿದ್ದಾರೆ ಎಂದರು.
ಸೆ.25ರಂದು ನಡೆಯುವ ರೈತ ದಸರಾದಲ್ಲಿ ಅಲಂಕೃತ ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್ ಜಾಥಾ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಸೈನ್ಸ್ ಮೈದಾನದಲ್ಲಿ ಪ್ರಗತಿಪರ ರೈತ ಮಹಿಳೆ ಕಮಲಮ್ಮ ಜಾಥಾಗೆ ಚಾಲನೆ ನೀಡುವರು. ಸೆ.26ರಂದು ಸಂಜೆ 6 ಗಂಟೆಗೆ ಶಿವಪ್ಪ ನಾಯಕ ಅರಮನೆಯಲ್ಲಿ ಕಲಾ ದಸರಾ ನಡೆಯಲಿದ್ದು, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವರಪುರ ಉದ್ಘಾಟಿಸುವರು ಎಂದರು.
ಸೆ.26ರಂದು ಸಂಜೆ 5 ಗಂಟೆಗೆ ಶಿವಪ್ಪನಾಯಕ ಅರಮನೆಯಲ್ಲಿ ನಡೆಯಲಿರುವ ನಗೆಹಬ್ಬ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಭಾಗವಹಿಸುವರು. ಸೆ.27ರಂದು ಬೆಳಿಗ್ಗೆ 10 ಗಂಟೆಗೆ ಪೌರ ಕಾರ್ಮಿಕರ ದಸರಾ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಪತ್ರಕರ್ತ ಎನ್. ರವಿಕುಮಾರ್ ಉದ್ಘಾಟಿಸುವರು ಎಂದರು.
ಸೆ.28 ರಂದು ಯೋಗದಸರಾ ಗಮಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರ ದಸರಾ ನಡೆಯಲಿದೆ. ಸೆ.28 ರಂದು ಸಂಜೆ 5 ಗಂಟೆಗೆ ಅಲ್ಲಮಪ್ರಭು(ಫ್ರೀಡಂಪಾರ್ಕ್) ಮೈದಾನದಲ್ಲಿ ಮ್ಯೂಸಿಕಲ್ ನೈಟ್ ನಡೆಯಲಿದ್ದು, ನಟ ಶಿವರಾಜ್ ಕುಮಾರ್ ಭಾಗವಹಿಸುವರು. ಸೆ.29ರಂದು ಬೆಳಿಗ್ಗೆ 10.30ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಸಾರ್ವಜನಿಕರಿಗೆ ಆಹಾರ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಸೆ.30ರಂದು ಕುವೆಂಪು ರಂಗಮಂದಿರದಲ್ಲಿ ಕಲಾ ಮತ್ತು ಜ್ಞಾನ ದಸರಾ, ವೀರಶೈವ ಕಲ್ಯಾಣ ಮಂಟಪದಲ್ಲಿ ಅಡುಗೆ ಮಾಡುವ ಸ್ಪರ್ಧೆ ನಡೆಯಲಿದೆ. ಅ.1ರಂದು ನಾಟ್ಯವೈಭವ ಕಾರ್ಯಕ್ರಮ ನಡೆಯಲಿದ್ದು, ನಟಿ ಹರ್ಷಿತಾ ಪೂರ್ಣಚ್ಚ ಆಗಮಿಸುವರು ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣಗೌಡ, ವಿವಿವಿಧ ಸಮಿತಿಯ ಮುಖ್ಯಸ್ಥರಾದ ಪುಷ್ಪಾವತಿ ಹೆಚ್.ಎಸ್. ಸಂತೋಷ್ ಹೆಚ್.ರಾಥೋಡ್, ಟಿ.ಆರ್. ಅನುಪಮ, ಡಿ. ಹರೀಶ್, ಸಿ.ಆರ್. ಸಿದ್ದಪ್ಪ, ಮಧುನಾಯಕ, ಸುಧಾಕರ ಬಿಜ್ಜೂರ್, ಕೃಷ್ಣಮೂರ್ತಿ, ಆರ್.ಬಿ. ಸತೀಶ್ ಇದ್ದರು.
ಅಂಬಾರಿ ಹೊರಲಿರುವ ‘ಸಾಗರ್’
‘ದಸರಾ ಮಹೋತ್ಸವದ ಅಂಬಾರಿ ಮೆರವಣಿಗೆ ಅ.2ರಂದು ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಈ ಬಾರಿ ಸಕ್ರೇಬೈಲು ಬಿಡಾರದ ಸಾಗರ್ ಬಾಲಣ್ಣ ಕುಂತಿ ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. ಈ ಬಾರಿ ಸಾಗರ್ ಆನೆ ಅಂಬಾರಿ ಹೊರಲಿದೆ. ಇಲ್ಲಿನ ಶಿವಪ್ಪನಾಯಕ ಅರಮನೆ ಬಳಿ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಅಂಬಾರಿ ಮೆರವಣಿಗೆಗೆ ನಂದಿ ಧ್ವಜ ಪೂಜೆ ನಡೆಯಲಿದೆ. ಅದೇ ದಿನ ಸಂಜೆ ಅಲ್ಲಮಪ್ರಭು ಮೈದಾನದಲ್ಲಿ ತಹಶೀಲ್ದಾರ್ ವಿ.ಎಸ್. ರಾಜೀವ್ ಅವರು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.