ಶಿವಮೊಗ್ಗ: ‘ಹಬ್ಬಗಳ ಆಚರಣೆಯ ಉದ್ದೇಶ ಮನರಂಜನೆ ಮಾತ್ರವಲ್ಲ, ಹಬ್ಬಗಳು ಪಾಠ ಕಲಿಸುವ ಶಾಲೆಯಂತೆ. ದಸರಾ ಹಬ್ಬದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಾಮಾಣಿಕತೆ, ಶಿಸ್ತು, ಧೈರ್ಯ, ತ್ಯಾಗ ಹಾಗೂ ಸೇವಾ ಮನೋಭಾವ ಬೆಳೆಯುತ್ತದೆ. ದಸರಾ ಹಬ್ಬದಿಂದ ಸಂಸ್ಕೃತಿ ಜೀವಂತವಾಗಿದೆ’ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಲ್ಲಿನ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಪ್ರತಿಷ್ಠಾಪಿಸಿದ ‘ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ’ಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸತ್ಯ ಹಾಗೂ ಧರ್ಮದ ಜಯವೇ ದಸರಾದ ಪರಿಕಲ್ಪನೆ. ಹಬ್ಬ ಎನ್ನುವುದು ಅಲಂಕಾರ, ಮೆರವಣಿಗೆಗೆ ಮಾತ್ರವೇ ಸೀಮಿತವಲ್ಲ, ಹಬ್ಬ ನಮ್ಮನ್ನು ಒಗ್ಗೂಡಿಸುತ್ತದೆ. ನಗರದಿಂದ ಗ್ರಾಮ, ಶ್ರೀಮಂತರಿಂದ ಸರಳ ಜೀವಿಯವರೆಗೂ ಕೂಡಿ ಸಂಭ್ರಮಿಸುವುದು ದಸರಾ ಹಬ್ಬದ ವಿಶೇಷತೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಯುವ ಸಮೂಹ ಸಂಸ್ಕೃತಿಯ ಮೌಲ್ಯ ಕಾಪಾಡಬೇಕು. ಇದರಿಂದ, ಸಮಾಜದಲ್ಲಿ ಸಮತೋಲನ ಕಾಪಾಡಬಹುದು. ಸಾರ್ವಜನಿಕ ಸ್ಥಳಗಳನ್ನು ಗೌರವಿಸಬೇಕು. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಸ್ವಚ್ಛತೆಗೆ ಒತ್ತು ನೀಡಿದರೆ, ದಸರಾ ಇನ್ನೂ ಸುಂದರವಾಗಲಿದೆ ಎಂದು ಸಲಹೆ ನೀಡಿದರು.
‘ದೇಶ ಸುಭದ್ರವಾಗಿರಲು ಸೈನಿಕರ ಪಾತ್ರ ಹಿರಿದು. ಊರ ಹಬ್ಬ ದಸರಾಗೆ ಚಾಲನೆ ನೀಡಲಾಗಿದೆ. ಕೆಟ್ಟ ಸಂಗತಿಗಳನ್ನು ಮರೆತು ಒಳ್ಳೆಯ ಕೆಲಸ ಮಾಡೋಣ. ಈ ಹಿಂದೆ ಪಾಲಿಕೆ ವಾಹನದಲ್ಲಿ ದಸರಾ ಉತ್ಸವ ನಡೆಯುತ್ತಿತ್ತು. ಈಗ ಆನೆಯ ಮೇಲೆ ಬೆಳ್ಳಿಯ ಅಂಬಾರಿಯಲ್ಲಿ ಉತ್ಸವ ನಡೆಯುತ್ತಿದೆ. ಮುಂದಿನ ಬಾರಿ ಚಿನ್ನದ ಅಂಬಾರಿಯಲ್ಲಿ ಉತ್ಸವ ನಡೆಸುವ ಪ್ರಸ್ತಾವವಿದೆ. ಸಾಧ್ಯವಾದರೆ ಮಾಡೋಣ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಅರ್ಚಕ ಶಂಕರಾನಂದ ಜೋಯಿಸ್ ವೇದ ಘೋಷ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಕ್ಷೇತ್ರ ಸಮನ್ವಯ ಅಧಿಕಾರಿ ಶಿವಪ್ಪ ಸಂಗಣ್ಣನವರ್, ಕಂದಾಯ ಅಧಿಕಾರಿ ನಾಗೇಂದ್ರ ಪ್ರಮುಖರಾದ ಎಚ್.ಸಿ.ಯೋಗೀಶ್, ಜಿ.ಮಧು, ಲಕ್ಷ್ಮೀ ಶಂಕರ ನಾಯ್ಕ, ಜ್ಞಾನೇಶ್, ನಾಗರಾಜ ಕಂಕಾರಿ, ಯಮುನಾ ರಂಗೇಗೌಡ, ರೇಖಾ ರಂಗನಾಥ, ಕೆ.ರಂಗನಾಥ ಇದ್ದರು.
‘ಸೇನೆ ಸೇರುವುದು ಅಪೂರ್ವ ಅವಕಾಶ’
ಮಕ್ಕಳು ಸೇನೆ ಸೇರಲು ಬಯಸಿದರೆ ತಡೆಯಬೇಡಿ. ಅದೊಂದು ಅಪೂರ್ವ ಅವಕಾಶ. ಸತತ 50 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಇಲ್ಲಿ ದಸರಾ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಹೇಳಿದರು. ಪ್ರತಿ ಹೆಜ್ಜೆಗೂ ಪತ್ನಿಯ ಬೆಂಬಲ ಇದೆ. ಒಬ್ಬ ಪುರುಷನ ಯಶಸ್ಸಿನ ಹಿಂದೆ ಪತ್ನಿಯ ಬೆಂಬಲ ಇರುವುದು ಮರೆಯಕೂಡದು. ದೇಶ ಉತ್ತಮ ಜ್ಞಾನ ತಂತ್ರಜ್ಞಾನ ಎಲ್ಲವೂ ಒಳಗೊಂಡಿದೆ. ಆದರೆ ಸ್ವಚ್ಛತೆ ವಿಚಾರದಲ್ಲಿ ಹಿಂದೆ ಉಳಿದಿದ್ದೇವೆ. ದಸರಾದಿಂದ ಸ್ಥಳೀಯ ಕಲಾವಿದರು ಹಾಗೂ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಲಾವಿದರಿಗೆ ಗೌರವ ನೀಡಿದರೆ ಸಂಸ್ಕೃತಿ ಉಳಿಯುತ್ತದೆ ಎಂದರು.
ಕಲಾತಂಡಗಳೊಂದಿಗೆ ಮೆರವಣಿಗೆ
ಮಹಾನಗರ ಪಾಲಿಕೆ ಆವರಣದಲ್ಲಿ ಅಲಂಕೃತಗೊಂಡ ಚಾಮುಂಡೇಶ್ವರಿ ದೇವಿಗೆ ಬೆಳಿಗ್ಗೆ ಪೂಜೆ ಸಲ್ಲಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಪಾಲಿಕೆ ಆವರಣದಿಂದ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಮಂಗಳ ವಾದ್ಯಗಳು ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ದೇವಿ ರವೀಂದ್ರನಗರದ ಪ್ರಸನ್ನ ಬಲಮುರಿ ಗಣಪತಿ ದೇವಾಲಯ ಬೊಮ್ಮನಕಟ್ಟೆಯ ಅನ್ನಪೂರ್ಣೇಶ್ವರಿ ದೇವಾಲಯ ಕೋಟೆ ಮಾರಿಕಾಂಬ ದೇವಾಲಯ ಶುಭಮಂಗಳ ಶನೈಶ್ವರ ದೇವಾಲಯ ಸೇರಿದಂತೆ ನಗರದ ಹಲವೆಡೆ ಶಕ್ತಿ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಗರದ ಹಲವು ಮನೆಗಳಲ್ಲಿ ದಸರಾ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ.
ಮಕ್ಕಳ ದಸರಾಗೆ ಚಾಲನೆ
ದಸರಾ ಮಹೋತ್ಸವ ಅಂಗವಾಗಿ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಕಾರ್ಯಕ್ರಮವನ್ನು ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಸ್ಕೇಟಿಂಗ್ ಪಟುಗಳಾದ ಅದ್ವಿಕಾ ನಾಯರ್ ಹಿತ ಪ್ರವೀಣ್ ಉದ್ಘಾಟಿಸಿದರು. ನಗರದ ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗಮಿಸಿದ್ದರು. ವಿವಿಧ ದೇವತೆಗಳು ಸ್ವಾತಂತ್ರ‍್ಯ ಹೋರಾಟಗಾರರ ವೇಷ ಧರಿಸಿ ಆಗಮಿಸಿದ್ದ ಮಕ್ಕಳು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಬೊಗಸೆಯಲ್ಲಿ ಬಾಟಲ್‌ಗೆ ನೀರು ತುಂಬುವ ಸ್ಪರ್ಧೆ ಶಾಟ್‌ಪುಟ್ 100 200 ಮೀ. ಓಟದ ಸ್ಪರ್ಧೆ ಛದ್ಮವೇಷ ಪ್ರಬಂಧ ಚಿತ್ರಕಲೆ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ಜಾದೂ ಪ್ರದರ್ಶನ ಇಂದು ಮಕ್ಕಳ ದಸರಾ ಅಂಗವಾಗಿ ಸೆ.23ರಂದು ಬೆಳಿಗ್ಗೆ 9 ಗಂಟೆಗೆ ಮಕ್ಕಳ ಜಾಥಾ ಇರಲಿದೆ. ನಗರದ ವಿವಿಧ ಸ್ಥಳಗಳಿಂದ ಜಾಥಾ ಪ್ರಾರಂಭವಾಗಿ ಶಿವಪ್ಪನಾಯಕ ಪ್ರತಿಮೆ ಬಳಿ ಮುಕ್ತಾಯಗೊಳ್ಳುವುದು. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಂಜೆ 5 ಗಂಟೆಗೆ ಮಕ್ಕಳ ದಸರಾ ಸಮಾರೋಪ ನಡೆಯಲಿದ್ದು ಪ್ರಶಾಂತ್ ಎಸ್.ಹೆಗಡೆ ಅವರಿಂದ ಜಾದೂ ಪ್ರದರ್ಶನ ಮತ್ತು ಎಚ್. ಎನ್. ಚಿನ್ಮಯಿ ಅವರಿಂದ ಭರತ ನಾಟ್ಯ ಇರಲಿದೆ. ಅದೇ ದಿನ ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸುಗಮ ಸಂಗೀತ ಯಕ್ಷ ಸಂಭ್ರಮ ಆಯೋಜಿಸಲಾಗಿದೆ.
‘ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಬದ್ಧ’
ಶಿವಮೊಗ್ಗ: ‘ಅರಣ್ಯ ಭೂಮಿ ಒತ್ತುವರಿ ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ರೈತರ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ತುಮರಿ ಸಮೀಪದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಸಿಗಂದೂರು ದಸರಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಪಾರಂಪರಿಕ ಅರಣ್ಯವಾಸಿಗಳು ಮತ್ತು ಬುಡಕಟ್ಟು ಸಮುದಾಯದ ಜನರ ಜೀವನಕ್ಕೆ ಆಧಾರವಾಗಿರುವ ಅರಣ್ಯ ಭೂಮಿ ಅರಣ್ಯ ಹಕ್ಕು ಕಾಯ್ದೆಯಡಿ 75 ವರ್ಷಗಳ ಸಾಗುವಳಿ ದಾಖಲೆ ಬದಲು 25 ವರ್ಷಗಳ ಸಡಿಲಿಕೆಗೆ ಒತ್ತಾಯ ಬಂದಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹಿರಿಯರಾದ ಕಾಗೋಡು ತಿಮ್ಮಪ್ಪ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಜಿಲ್ಲಾಧಿಕಾರಿ ಸಹಯೋಗದಲ್ಲಿ ಸಮಸ್ಯೆ ಬಗೆಹರಿಸಲು ಸರ್ವೇ ಮಾಡಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶನ ಅನ್ವಯ ಈಗಾಗಲೇ ಶೇ 90 ರಷ್ಟು ಸರ್ವೇ ಕಾರ್ಯ ಮುಗಿದಿದ್ದು ಸದ್ಯದಲ್ಲೆ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದರು.
ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಳಿಸಿದ ಆಶ್ರಯ ಆರಾಧನಾ ಹಲವು ಕಾರ್ಯಕ್ರಮಗಳು ಇಂದಿಗೂ ಎಲ್ಲ ವರ್ಗದ ಅಭಿವೃದ್ಧಿಗೆ ಸಹಕಾರಿ ಆಗಿವೆ. ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದಾಗ ಕಂದಾಯ ಕಾಯಿದೆ 94 ಸಿ ಹಾಗೂ 94 ಸಿಸಿ ಗೆ ತಿದ್ದುಪಡಿ ತಂದು ಕಾನೂನು ಮಾಡಿ ಬಗರ್ ಹುಕುಂ ಸಾಗುವಳಿ ದಾರರಿಗೆ ಸಾಕಷ್ಟು ಅನುಕೂಲ ಮಾಡಿದ್ದರು. ಇಂತವರ ಮಾರ್ಗದರ್ಶನದಿಂದ ಉತ್ತಮ ಕೆಲಸ ಮಾಡಲು ಸಾಧ್ಯ ಎಂದರು.
‘ಹಿಂದುಳಿದ ಸಮುದಾಯಕ್ಕೆ ಸೇರಿದ ಸಿಗಂದೂರು ದೇವಸ್ಥಾನದ ಮೇಲೆ ಹಲವು ಷಡ್ಯಂತ್ರಗಳು ನಡೆದಿದೆ. ಕ್ಷೇತ್ರದ ರಕ್ಷಣೆ ನಾವು ಯಾವಾಗಲೂ ಸಿದ್ಧರಿದ್ದೇವೆ. ಈಗಾಗಲೇ ಸರ್ಕಾರಿ ಶಾಲೆಗಳ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿರುವುದು ಶ್ಲಾಘಿಸಿದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಹೇಳಿದರು.
ಇಲ್ಲಿನ ಹಲ್ಕೆ ಮುಪ್ಪಾನೆ ಲಾಂಚ್ ಮಾರ್ಗವನ್ನು ಅಭಿವೃದ್ಧಿ ಪಡಿಸಿ ಉತ್ತಮ ಲಾಂಚ್ ಸೇವೆ ಒದಗಿಸುವಂತೆ ಸಿಗಂದೂರು ಧರ್ಮಾಧಿಕಾರಿ ಎಸ್. ರಾಮಪ್ಪ ಅವರು ಸಚಿವರಿಗೆ ಮನವಿ ಸಲ್ಲಿಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಜ್ ಅಹಮದ್ ದೇವಸ್ಥಾನದ ಕಾರ್ಯದರ್ಶಿ ಎಚ್. ಆರ್. ರವಿಕುಮಾರ್ ಶೀದೇವಿ ರಾಮಚಂದ್ರ ಆದರ್ಶ ಹುಂಚದಕಟ್ಟೆ ಜಿ. ಡಿ. ನಾರಾಯಣಪ್ಪ ಪ್ರವೀಣ ಹಿರೇ ಇಡಗೋಡು ರಾಮಚಂದ್ರ ಹಾಬಿಗೆ ನಟಿ ಕಾರುಣ್ಯ ರಾಮ್ ಇದ್ದರು.
ವಿವಿಧೆಡೆಯಿಂದ ಭಕ್ತರು ಭಾಗಿ
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಸಿಗಂದೂರು ದೇವಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಗೆ ಅಲಂಕಾರ ಪೂಜೆ ನವಚಂಡಿಕಾ ಹೋಮ ಹೋಮ ಗುರುಗಳ ಆರಾಧನೆ ಮಧ್ಯಾಹ್ನ ನೈವೇದ್ಯ ನೆಡೆಯಿತು. ಸಂಜೆ 6 ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ 7ರಿಂದ ದೀಪೋತ್ಸವ ಕಾರ್ಯಕ್ರಮದಲ್ಲಿ ಆಪಾರ ಪ್ರಮಾಣದ ಭಕ್ತರು ಪಾಲ್ಗೊಂಡಿದ್ದರು. ನವರಾತ್ರಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಭಕ್ತರು ತಂಡೋಪ ತಂಡವಾಗಿ ಬಂದು ದೇವಿ ದರ್ಶನ ಪಡೆದು ಮುಡಿ ಗಂಧ ಪ್ರಸಾಧ ಸ್ವೀಕರಿಸಿದರು.
ನವರಾತ್ರಿಯಂದು ಆತ್ಮದ ಶುದ್ಧಿಯೊಂದಿಗೆ ಸಕಾರಾತ್ಮಕ ಅಂಶಗಳನ್ನು ರೂಢಿಸಿಕೊಳ್ಳೋಣ-ಕೆ. ಮಾಯಣ್ಣ ಗೌಡ, ಮಹಾನಗರ ಪಾಲಿಕೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.