ADVERTISEMENT

ಬೀದಿಗೆ ಬಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಜಗಳ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 12:28 IST
Last Updated 9 ಏಪ್ರಿಲ್ 2021, 12:28 IST

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಆಡಳಿತ ಮಂಡಳಿ ಮಧ್ಯದ ಜಗಳ ಬೀದಿಗೆ ಬಿದ್ದಿದೆ. ಆಡಳಿತ ಮಂಡಳಿ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕ ಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಬ್ಯಾಂಕ್‌ ನಿರ್ದೇಶಕ ಕೆ.ಪಿ. ದುಗ್ಗಪ್ಪಗೌಡ ಶುಕ್ರವಾರ ಆರೋಪಿಸಿದರು.

ಹಿಂದಿನ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಅವರು ಪಕ್ಷಭೇದ ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಂಕ್‌ ಮುನ್ನಡೆಸುತ್ತಿದ್ದರು. ಚನ್ನವೀರಪ್ಪ ಅವರು ಅಧ್ಯಕ್ಷರಾದ ನಂತರ ದೌರ್ಜನ್ಯ ಹೆಚ್ಚುತ್ತಿದೆ. ನಿರ್ದೇಶಕರ ಮಾತುಗಳಿಗೆ ಮನ್ನಣೆ ದೊರೆಯುತ್ತಿಲ್ಲ. ವ್ಯವಸ್ಥಾಪಕ ನಿರ್ದೇಶಕರ ಬಳಿ ಕೆಲವು ಸಂದೇಶಗಳಿಗೆ ಉತ್ತರ ಬಯಸಿದರೆ ಬಂಧಿಸಲು ಪೊಲೀಸರಿಗೆ ಸೂಚನೆ ನೀಡುತ್ತಾರೆ. ಬಲವಂತವಾಗಿ ಹೊರದಬ್ಬಿಸುತ್ತಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬ್ಯಾಂಕ್ ಪತನಕ್ಕೆ ಕಾರಣರಾಗುತ್ತಿದ್ದಾರೆ. ಹಿಂದಿನ ಹಣಕಾಸು ವರ್ಷದಲ್ಲಿ ಬ್ಯಾಂಕ್ 19 ಕೋಟಿ ಲಾಭದಲ್ಲಿತ್ತು. ಸೆ. 20ರ ನಂತರ ಬ್ಯಾಂಕ್‌ನಲ್ಲಿ ಸೌಹಾರ್ದ ವಾತಾವರಣ ಇಲ್ಲವಾಗಿದೆ. ತಾವು ಅಧ್ಯಕ್ಷರಾಗುವ ಪೂರ್ವದಲ್ಲಿ ಹೆಚ್ಚುವರಿ ಷೇರು ವಾಪಸ್‌ ನೀಡುವ ಮಾತು ನೀಡಿದ್ದರು. ಆದರೆ, ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ಯಾವ ರೈತರಿಗೂ ಹೆಚ್ಚುವರಿ ಸಾಲ ನೀಡಿಲ್ಲ. ಆಡಳಿತ ಮಂಡಳಿ ಅನುಮತಿಯಿಲ್ಲದೆ ಬ್ಯಾಂಕಿನ 23 ನೌಕರರ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆಯಲ್ಲಿ ಅವ್ಯವಹಾರ ನಡೆದಿದೆ. ಅಶಿಸ್ತಿನಿಂದ ಶಿಕ್ಷೆಗೆ ಒಳಪಟ್ಟ ಸಿಬ್ಬಂದಿಗೂ ಕ್ಷೇತ್ರಾಧಿಕಾರಿ, ತನಿಖಾ ವರದಿಯಲ್ಲಿ ತಪ್ಪಿತಸ್ಥ ಎಂದು ಉಲ್ಲೇಖಿಸಿರುವ ನೌಕರನಿಗೆ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರೈತರಿಗೆ ಬೆಳೆ ಸಾಲ ನೀಡುವಲ್ಲಿ ಅಕ್ರಮ ನಡೆಯುತ್ತಿದೆ. ರೈತರಿಂದ ಕಮಿಷನ್ ಪಡೆಯುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಆಶಯದಂತೆ ರೈತರಿಗೆ ಬೆಳೆ ಸಾಲ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಇತರೆ ನಿರ್ದೇಶಕರ ಜತೆ ಸೇರಿ ಅಸಹಕಾರ ಚಳವಳಿ ಆರಂಭಿಸಲಾಗುವುದು. ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಅವರು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಲ್.ಜಗದೀಶ್, ವಿಜಯಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.