
ಶಿವಮೊಗ್ಗ: ‘ದೇವಾಲಯದಲ್ಲಿ ದೇವರನ್ನು ಹುಡುಕದೆ ನಮ್ಮ ದೇಹವೆಂಬ ದೇವಾಲಯದಲ್ಲಿ ಆತ್ಮ ರೂಪದಲ್ಲಿ ನೆಲೆಸಿದ ದೇವರನ್ನು ಕಾಣಬೇಕು’ ಎಂದು ವಾರಣಾಸಿಯ ಜಂಗಮವಾಣಿ ವಿದ್ಯಾವಾಚಸ್ಪತಿ ಚಂದ್ರಶೇಖರ ಶಿವಾಚಾರ್ಯ ಹೇಳಿದರು.
ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಯೋಜಿಸಿದ್ದ ‘ಲಿಂಗತತ್ವ ದರ್ಶನ’ ಕುರಿತ ಆಧ್ಯಾತ್ಮಿಕ ಪ್ರವಚನದಲ್ಲಿ ಆಶೀರ್ವಚನ ನೀಡಿದರು.
ವೀರಶೈವ ಪಂಚಾಚಾರ್ಯರು, ಶಿವಾಚಾರ್ಯರು ದೇವಾಲಯಗಳನ್ನು ಕಟ್ಟದೆ ದೇಹವೇ ದೇವಾಲಯವೆಂಬ ಮನೋಭಾವವನ್ನು ಸಮಾಜ ಮತ್ತು ಭಕ್ತರಲ್ಲಿ ಬೆಳೆಸಿದರು. ದೇವರ ನೆಲೆಗೆ ದೇಹಕ್ಕಿಂತ ಶ್ರೇಷ್ಠವಾದುದು ಬೇರೆ ಇಲ್ಲ. ಭಕ್ತರು ದೇವಾಲಯಗಳನ್ನು ಕಟ್ಟಬಹುದು. ಆದರೆ, ದೇವರು ಮಾತ್ರ ತನ್ನ ವಾಸಕ್ಕೆ ಭಕ್ತರ ದೇಹವನ್ನೇ ಇಷ್ಟಪಡುತ್ತಾನೆ ಎಂದರು.
ಭೂಮಿ ಮೇಲೆ ರೈತ ಬೀಜ ಬಿತ್ತಬಹುದು. ಆದರೆ, ಫಲಕೊಡುವುದು ದೇವರು ಮಾತ್ರ. ಹಾಗೆಯೆ ಮಾತೆಯ ಗರ್ಭದಲ್ಲಿ ನಿರ್ಮಾಣವಾಗುವ ದೇಹವನ್ನು ದೇವರಲ್ಲದೆ ಇನ್ಯಾರು ನಿರ್ಮಿಸಲು ಸಾಧ್ಯ. ಆತ್ಮ ರೂಪದಲ್ಲಿ ಆತ ಬಂದು ನೆಲೆಸುತ್ತಾನೆ ಎಂದರು.
ತಾವರೆಕೆರೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತಾನಾಡಿದರು.
ನಿಜವಾದ ಆಧ್ಯಾತ್ಮಿಕತೆಯು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಸರಿಯಾದ ನಡವಳಿಕೆ, ನಮ್ರತೆ ಮತ್ತು ಸೇವೆಯಲ್ಲಿ ಪ್ರತಿಫಲಿಸುತ್ತದೆ ಎಂದರು. ಸತ್ಯ, ಶಿಸ್ತು ಮತ್ತು ಆಂತರಿಕ ಪರಿಶುದ್ಧತೆಯ ಹಾದಿಯಲ್ಲಿ ನಡೆಯಲು ನಮಗೆ ಸ್ಫೂರ್ತಿ ನೀಡುತ್ತದೆ. ಆಧ್ಯಾತ್ಮಿಕ ಬೆಳವಣಿಗೆಯು ಸಾಮಾಜಿಕ ಜವಾಬ್ದಾರಿಯೊಂದಿಗೆ ಕೈಜೋಡಿಸುತ್ತದೆ. ಸಾಮರಸ್ಯ, ಸಮಾನತೆ ಮತ್ತು ಎಲ್ಲಾ ಜೀವಿಗಳಿಗೆ ಗೌರವವನ್ನು ಪ್ರೋತ್ಸಾಹಿಸುತ್ತದೆ ಎಂದರು.
ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವೇಶ್ವರ ವೀರಶೈವ–ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಕಾರ್ಯದರ್ಶಿ ಎಸ್.ಪಿ. ದಿನೇಶ್, ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ್, ನೌಕರರ ಸಂಘದ ಕಾರ್ಯದರ್ಶಿ ಶಿವಯೋಗಿ ಬಿ.ಯಲಿ, ಗೌರವಾಧ್ಯಕ್ಷ ಸಿ.ಜಿ. ಪರಮೇಶ್ವರಪ್ಪ, ಖಜಾಂಚಿ ಎನ್.ಬಿ.ರಂಗನಾಥ್ ಇದ್ದರು.
ಶಾಮನೂರು ಸ್ಥಾನ ಯಡಿಯೂರಪ್ಪ ವಹಿಸಿಕೊಳ್ಳಲಿ..ಶಾಮನೂರು ಶಿವಶಂಕರಪ್ಪ ವೀರಶೈವ–ಲಿಂಗಾಯತದ ಎಲ್ಲ ಮಠಗಳು ಒಳಪಂಗಡಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದರು. ನಿರಂತರವಾಗಿ ಅವರು ಅದನ್ನೇ ಪ್ರತಿಪಾದಿಸಿದರು. ಶಿವೈಕ್ಯರಾದ ಶಾಮನೂರು ಶಿವಶಂಕರಪ್ಪ ನವರ ಸ್ಥಾನವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಹಿಸಿಕೊಳ್ಳಬೇಕು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಬೇಕು ಎಂದು ಶ್ರೀ ಬಸವೇಶ್ವರ ವೀರಶೈವ–ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಆಗ್ರಹಿಸಿದರು.