ADVERTISEMENT

ಶಿವಮೊಗ್ಗ: ತೆರವು ಹೆಸರಲ್ಲಿ ಬಡವರಿಗೆ ಕಿರುಕುಳ ನೀಡಿದರೆ ಸುಮ್ಮನಿರಲ್ಲ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:21 IST
Last Updated 3 ಜನವರಿ 2026, 6:21 IST
ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಪ್ರಶ್ನೆಗಳಿಗೆ ತಹಶೀಲ್ದಾರ್‌ ಎಸ್‌.ರಂಜಿತ್‌ ಉತ್ತರಿಸಿದರು.
ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಪ್ರಶ್ನೆಗಳಿಗೆ ತಹಶೀಲ್ದಾರ್‌ ಎಸ್‌.ರಂಜಿತ್‌ ಉತ್ತರಿಸಿದರು.   

ತೀರ್ಥಹಳ್ಳಿ: ಕಾಂಗ್ರೆಸ್‌ ನಾಯಕರ ಅಣತಿಯಂತೆ ತಹಸೀಲ್ದಾರ್‌ ಸಾಗುವಳಿ ಜಮೀನು, ವಾಸದ ಮನೆ ತೆರವು ಮಾಡುವಂತೆ ಆದೇಶ ಹೊರಡಿಸುತ್ತಿದ್ದಾರೆ. ತೆರವು ಹೆಸರಿನಲ್ಲಿ ಬಡವರಿಗೆ ಕಿರುಕುಳ ನೀಡಿದರೆ ಬಿಜೆಪಿ ಸಮ್ಮನಿರುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

ಶುಕ್ರವಾರ ಬಿಜೆಪಿ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಕಚೇರಿಗೆ ದಿಢೀರ್‌ ಮುತ್ತಿಗೆ ಹಾಕಿ ಧರಣಿ ನಡೆಸಿ ಅವರು ಮಾತನಾಡಿ, ರಾಜ್ಯ ಸರ್ಕಾರ ರೈತರನ್ನು ಕಂದಾಯ ಇಲಾಖೆ ಮೂಲಕ ಬಲವಂತವಾಗಿ ಒಕ್ಕಲೆಬ್ಬಿಸಲು ಹೊರಟಿದೆ. ಶ್ರೀಮಂತರು, ಬಲಾಡ್ಯರು, ಕಾಂಗ್ರೆಸ್‌ ನಾಯಕರು ಹೇಳುವ ಕೆಲಸವನ್ನು ಚಾಚೂತಪ್ಪದೆ ಮಾಡುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.

ತಾಲೂಕು ಕಚೇರಿಯಲ್ಲಿ ಬ್ರೋಕರ್‌ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವಂತೆ ಹಲವು ಬಾರಿ ಸೂಚಿಸಿದ್ದೇನೆ. ಕಚೇರಿ ದಾಖಲೆಗಳನ್ನು ಕಳವು ಮಾಡುತ್ತಿದ್ದಾರೆ. ಕೆಲವೆ ದಿನದಲ್ಲಿ ಅವರುಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ. ಹನಸ ಗ್ರಾಮದಲ್ಲಿ ಕೇವಲ 11ವರೆ ಗುಂಟೆ ಮನೆ ಕಟ್ಟಿದ ಜಾಗ ತೆರವಿಗೆ ಆದೇಶ ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಿ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ಕೋಣಂದೂರು ಸಮೀಪದ ಹುಲ್ಕೋಡು ಗ್ರಾಮದಲ್ಲಿ ಬಡ ಕುಟುಂಬಕ್ಕೆ ಬಗರ್‌ಹುಕುಂ ಸಾಗುವಳಿ ಸಕ್ರಮ ಯೋಜನೆಯಡಿ ಜಮೀನು ಮಂಜೂರು ಮಾಡಲಾಗಿದೆ. ಆ ಸ್ಥಳಕ್ಕೆ ತಹಸೀಲ್ದಾರ್‌ ತೆರಳಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಇನ್ಮುಂದೆ ಪ್ರತಿ ದಿನ ತಾಲೂಕು ಕಚೇರಿಗೆ ಬಿಜೆಪಿ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.

ಮೇಳಿಗೆ ಗ್ರಾಮದಲ್ಲಿ ಹೂವಪ್ಪ ನಾಯಕ್‌ ಪೂರ್ವಿಕರ ಕಾಲದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಅವರ ಖಾತೆ ಜಮೀನು ಪಕ್ಕದಲ್ಲಿ 1 ಎಕರೆ ಸರ್ಕಾರಿ ಜಾಗ ತೆರವಿಗೆ ಆದೇಶ ನೀಡಿ 192 (ಎ) ಅನ್ವಯ ಪ್ರಕರಣ ದಾಖಲಿಸಲಾಗುತ್ತಿದೆ. ಕಾಯ್ದೆಯನ್ನೇ ಬಿಜೆಪಿ ಸರ್ಕಾರ ಕಿತ್ತು ಹಾಕಿದೆ. ನಗರ ಪ್ರದೇಶಕ್ಕೆ ಮಾತ್ರ ಅನ್ವಯಿಸುವಂತೆ ಕಾಯ್ದೆ ಜಾರಿ ಮಾಡಲಾಗಿದೆ ಎಂದರು.

“ನನ್ನ ತಂದೆ ಹೆಸರಿಗೆ ಜಾಗ ಮಂಜೂರಾಗಿದ್ದು ಈಗ ಅವರು ಹೃದಯ ಸಂಬಂಧಿ ರೋಗಕ್ಕೆ ಒಳಗಾಗಿದ್ದಾರೆ. ಜಾಗಕ್ಕೆ ಬಂದ ನೀವು ಭವಿಷ್ಯ ಹಾಳಾಗುತ್ತೆ ಎಂದು ಬೆದರಿಕೆ ಹಾಕಿದ್ದೀರಿ. ಯಾವ ಅರ್ಥದಲ್ಲಿ ಈ ಮಾತು ಹೇಳಿದ್ರಿ. ಬಡವರು ಬದುಕುವುದು ತಪ್ಪಾ” ಎಂದು ಮೇಳಿಗೆ ಗ್ರಾಮದ ಯುವತಿಯೊಬ್ಬರು ಪ್ರಶ್ನಿಸಿದರು.

“ನಾನು ಕಾನೂನು ಪ್ರಕಾರವೇ ಕೆಲಸ ಮಾಡಬೇಕಿದೆ. ಕೇಳಿದ ಪ್ರಶ್ನೆಗೆ ಕಾನೂನು ಪ್ರಕಾರವೇ ಉತ್ತರಿಸುತ್ತಿದ್ದೇನೆ. ಜಂಬುವಳ್ಳಿ ಗ್ರಾಮದಲ್ಲಿ ಯಾರಿಗೂ ಜಾಗ ಒತ್ತುವರಿಗೆ ಅವಕಾಶ ನೀಡಿಲ್ಲ. ಮೇಳಿಗೆ ಗ್ರಾಮದಲ್ಲಿ ಹೂವಪ್ಪ ನಾಯಕ್‌ ಅವರು ಸುಮಾರು 2ವರೆ ಎಕರೆ ಜಾಗ ಒತ್ತುವರಿ ಹೊಂದಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ” ಎಂದು ತಹಶೀಲ್ದಾರ್‌ ಎಸ್.ರಂಜಿತ್‌ ಪ್ರತಿಭಟನಕಾರರಿಗೆ ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್‌, ರೈತ ಮೋರ್ಚಾ ಅಧ್ಯಕ್ಷ ನಂಬಳ ಮುರುಳಿ, ಬಿಜೆಪಿ ಮುಖಂಡರಾದ ಅಶೋಕಮೂರ್ತಿ, ಸಾಲೇಕೊಪ್ಪ ರಾಮಚಂದ್ರ, ಬೇಗುವಳ್ಳಿ ಕವಿರಾಜ್‌, ರಕ್ಷಿತ್‌ ಮೇಗರವಳ್ಳಿ, ಅರುಣ್‌ಶೆಟ್ಟಿ, ಪ್ರಶಾಂತ್‌ ಕುಕ್ಕೆ, ಕುರುವಳ್ಳಿ ಪೂರ್ಣೇಶ್‌, ಕಡ್ತೂರು ಯಶಸ್ವಿ, ತಳಲೆ ಪ್ರಸಾದಶೆಟ್ಟಿ, ಎಸಿಎಫ್‌ ಮಧುಸೂದನ್‌, ಇನ್ಸಪೆಕ್ಸರ್‌ ಇಮ್ರಾನ್‌ ಬೇಗ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.