
ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಅರೆಬಿಳಚಿ ಕ್ಯಾಂಪ್ ಬಳಿ ಭದ್ರಾ ಬಲದಂಡೆ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಭಾನುವಾರ ನಾಪತ್ತೆಯಾಗಿದ್ದಾರೆ. ಅವರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಅರಬಿಳಚಿ ಕ್ಯಾಂಪ್ ನಿವಾಸಿಗಳಾದ ನೀಲಾಬಾಯಿ (50), ಮಗ ರವಿಕುಮಾರ್ (23), ಮಗಳು ಶ್ವೇತಾ (24), ಅಳಿಯ ಪರಶುರಾಮ್ (28) ನಾಪತ್ತೆಯಾದವರು.
ಅರೆಬಿಳಚಿ ಕ್ಯಾಂಪ್ ನಲ್ಲಿ ಜ.12ರಿಂದ 16ರವರೆಗೆ ಮಾರಿಕಾಂಬ ಜಾತ್ರೆ ಇತ್ತು. ಅದಕ್ಕೆ ಶ್ವೇತಾ ಪತಿಯೊಂದಿಗೆ ತವರು ಮನೆಗೆ ಬಂದಿದ್ದರು.
ಭಾನುವಾರ ಕುಟುಂಬದ ಎಲ್ಲರೂ ಭದ್ರಾ ಬಲದಂಡೆ ನಾಲೆಯಲ್ಲಿ ಬಟ್ಟೆ ಹಾಗೂ ಪಾತ್ರೆ ತೊಳೆಯಲು ತೆರಳಿದ್ದರು.
ಸಂಜೆಯಾದರೂ ಮನೆಗೆ ಮರಳದಿರುವುದು ಹಾಗೂ ನಾಲೆಯ ದಂಡೆಯಲ್ಲಿ ಬಟ್ಟೆ, ಪಾತ್ರೆಗಳು ಇರುವುದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ
ಬಟ್ಟೆ ಒಗೆಯುವಾಗ ನಾಲೆಗೆ ಜಾರಿ ಒಬ್ಬರ ರಕ್ಷಣೆಗೆ ಮತ್ತೊಬ್ಬರು ಅವರ ಹಿಂದೆ ಇನ್ನೊಬ್ಬರು ಎಂಬಂತೆ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಶೋಧ ಕಾರ್ಯ ನಡೆಯುತ್ತಿದ್ದು, ಘಟನೆಗೆ ನಿಖರ ಕಾರಣ ಇನ್ನಷ್ಟೆ ತಿಳಿದು ಬರಬೇಕಿದೆ. ಹೆಚ್ಚುವರಿ ಎಸ್ಪಿ ಎ.ಜಿ.ಕಾರಿಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.