ADVERTISEMENT

ಶಿವಮೊಗ್ಗ: ನಾಮಫಲಕ ಕಾಣದ್ದಕ್ಕೆ ಮರಗಳಿಗೇ ವಿಷಪ್ರಾಶನ?

ನಾಗರಾಜ ಹುಲಿಮನೆ
Published 14 ಏಪ್ರಿಲ್ 2025, 7:41 IST
Last Updated 14 ಏಪ್ರಿಲ್ 2025, 7:41 IST
ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಸ್ಥಾನ ಹಿಂಭಾಗದ ಮುಖ್ಯ ರಸ್ತೆಯಲ್ಲಿ ಹಲಸಿನ ಮರದ ಬುಡವನ್ನು ಸುತ್ತಲು ಕಡಿದು ಪಾದರಸ ತುಂಬಿ ಬಟ್ಟೆಯಿಂದ ಮುಚ್ಚಿಟ್ಟು ಕೊಂದಿರುವುದು 
ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಸ್ಥಾನ ಹಿಂಭಾಗದ ಮುಖ್ಯ ರಸ್ತೆಯಲ್ಲಿ ಹಲಸಿನ ಮರದ ಬುಡವನ್ನು ಸುತ್ತಲು ಕಡಿದು ಪಾದರಸ ತುಂಬಿ ಬಟ್ಟೆಯಿಂದ ಮುಚ್ಚಿಟ್ಟು ಕೊಂದಿರುವುದು    

ಶಿವಮೊಗ್ಗ: ಅಂಗಡಿ–ಮುಂಗಟ್ಟು ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕ ಕಾಣುತ್ತಿಲ್ಲ ಎಂಬ ಕಾರಣವೊಡ್ಡಿ ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿದ್ದ ಮರಗಳಿಗೆ ವಿಷ ಉಣಿಸಿ ಕೊಲ್ಲಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ನೆರಳಿಗಾಗಿ ಹಾಗೂ ನಗರದ ಸೌಂದರ್ಯ ಕಾಪಾಡುವ ಉದ್ದೇಶದಿಂದ ಸಂಪಿಗೆ, ಹೊಂಗೆ, ಹಲಸು ಸೇರಿದಂತೆ ಕಾಡು ಜಾತಿಯ ಮರಗಳನ್ನು ಬೆಳೆಸಲಾಗಿದೆ. ಆದರೆ, ಕಿಡಿಗೇಡಿ ಕೃತ್ಯದಿಂದಾಗಿ ಇವು ನಾಶವಾಗುತ್ತಿದ್ದು  ಪರಿಸರಾಸಕ್ತರ ಆತಂಕಕ್ಕೆ ಕಾರಣವಾಗಿದೆ.

ಇಲ್ಲಿನ ನೆಹರೂ ರಸ್ತೆಯ ಟಿ.ಸೀನಪ್ಪ ಶೆಟ್ಟಿ ವೃತ್ತದಿಂದ ಅಮಿರ್ ಅಹಮ್ಮದ್ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ತಿಲಕ್ ನಗರ ಮುಖ್ಯ ರಸ್ತೆ, ಕುವೆಂಪು ರಸ್ತೆ, ರವೀಂದ್ರ ನಗರ ರಸ್ತೆ, ಬಿ.ಎಚ್.ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಜಾತಿಯ ಮರಗಳನ್ನು ಬೆಳೆಸಲಾಗಿದೆ. ಆದರೆ, ಈಗ ಇವು ದಿಢೀರನೆ ಒಣಗಲು ಆರಂಭಿಸಿವೆ. ನೆಹರೂ ರಸ್ತೆಯೊಂದರಲ್ಲಿಯೇ 50ಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿದೆ. ಈ ಪೈಕಿ 6ಕ್ಕೂ ಹೆಚ್ಚು ಹೊಂಗೆ ಹಾಗೂ ಸಂಪಿಗೆ ಮರಗಳು ಒಣಗಿ ನಿಂತಿವೆ. 

ADVERTISEMENT

‘ಆರೇಳು ವರ್ಷಗಳ ಹಿಂದೆ ನೆಟ್ಟಿದ್ದ ಮರಗಳು ಈಗ ದೊಡ್ಡದಾಗಿದ್ದು, ನೆರಳು ನೀಡುತ್ತಿವೆ. ನಗರದ ಸೌಂದರ್ಯ ಕಾಪಾಡುತ್ತಿವೆ. ಆದರೆ, ಅಂಗಡಿಗಳ ನಾಮಫಲಕ ಕಾಣುತ್ತಿಲ್ಲ. ಇದರಿಂದ, ಗ್ರಾಹಕರು ಅಂಗಡಿಗಳಿಗೆ ಬರುತ್ತಿಲ್ಲ. ವ್ಯಾಪಾರದಲ್ಲಿ ಲಾಭವಾಗುತ್ತಿಲ್ಲ ಎಂಬ ಕಾರಣಕ್ಕೆ ಕಿಡಿಗೇಡಿಗಳು ರಂಧ್ರ ಕೊರೆದು, ವಿಷ (ಪಾದರಸ) ಉಣಿಸಿ ಕೊಲ್ಲುತ್ತಿದ್ದಾರೆ’ ಎಂದು ಪರಿಸರಾಸಕ್ತ ತ್ಯಾಗರಾಜ ಮಿತ್ಯಾಂತ ದೂರಿದರು.

‘ನಗರ ವ್ಯಾಪ್ತಿಯಲ್ಲಿ 8 ವರ್ಷದ ಹಿಂದೆ 3,000ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿತ್ತು. ಕ್ರಮೇಣ ಇವು ಕಣ್ಮರೆಯಾಗುತ್ತಿವೆ. ಮನೆಯ ಎದುರು ಮರಗಳಿದ್ದರೆ ಬೇಸಿಗೆಯಲ್ಲಿ ಎಲೆ ಉದುರುತ್ತದೆ. ಇದರಿಂದ, ಕಸ ಹರಡುತ್ತದೆ ಎನ್ನುವ ಕಾರಣದಿಂದ  ಮರಗಳಿಗೆ ವಿಷ ಉಣಿಸಲಾಗುತ್ತಿದೆ. ಅದೇ ರೀತಿ, ಮಳಿಗೆಗಳು ಕಾಣಬೇಕು ಎಂಬ ಕಾರಣಕ್ಕೂ ಇವುಗಳನ್ನು ಸಾಯಿಸುವುದು ಇದೆ. ಈ ಬಗ್ಗೆ ಅನೇಕ ಬಾರಿ ದೂರು ಸಲ್ಲಿಸಲಾಗಿದೆ. ಆದರೂ ಸಂಬಂಧಪಟ್ಟವರು ಕ್ರಮ ಕೈಗೊಂಡಿಲ್ಲ’ ಎಂದು ಪರಿಸರ ಕಾರ್ಯಕರ್ತ ಬಾಲಕೃಷ್ಣ ನಾಯ್ಡು ತಿಳಿಸಿದರು.

‘ಮರಗಳನ್ನು ತೆರವುಗೊಳಿಸಬೇಕು ಎಂದು ಕೋರಿ ಪ್ರತಿ ತಿಂಗಳು ಅರಣ್ಯ ಇಲಾಖೆಗೆ 100ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಒಣಗಿದ ಅಥವಾ ಅಪಾಯಕಾರಿ ಎನಿಸಿದ ಮರಗಳನ್ನಷ್ಟೇ ತೆರವುಗೊಳಿಸಬೇಕೆಂಬ ನಿಯಮವಿದೆ. ಆದರೆ, ಶಿವಮೊಗ್ಗದಲ್ಲಿ ಇದರ ಪಾಲನೆಯಾಗುತ್ತಿಲ್ಲ‌. ಪರವಾನಗಿ ಪಡೆಯದೇ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಕೋರಿದರು.

‘ಬೆಂಗಳೂರಿನಂತಹ ಮಹಾನಗರದಲ್ಲಿ ಕಾನೂನು ಉಲ್ಲಂಘಿಸಿ ಮರ, ಗಿಡಗಳನ್ನು ತೆರವುಗೊಳಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ, ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯಿಂದ ಅರಣ್ಯ ಇಲಾಖೆಗೆ ಸಹಕಾರ ಸಿಗುತ್ತಿಲ್ಲ. ಅರಣ್ಯ ಹಾಗೂ ನಗರ ವ್ಯಾಪ್ತಿಯಲ್ಲಿ ಬೆಳೆಸಲಾದ ಮರ–ಗಿಡಗಳನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ, ಮುಂದೊಂದು ದಿನ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಎದುರಾಗಲಿದೆ’ ಎಂದು ಹೇಳಿದರು.

ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ಸಂಪಿಗೆ ಮರವೊಂದು ಸಂಪೂರ್ಣ ಒಣಗಿರುವುದು  –ಪ್ರಜಾವಾಣಿ ಚಿತ್ರ ಶಿವಮೊಗ್ಗ ನಾಗರಾಜ್
ಕವಿತಾ ಯೋಗಪ್ಪನವರ್

Highlights -

Quote - ಮರಗಳಿಗೆ ವಿಷ ಉಣಿಸಿ ಕೊಲ್ಲುತ್ತಿರುವುದು ಆತಂಕದ ಸಂಗತಿ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕವಿತಾ ಯೋಗಪ್ಪನವರ್ ಮಹಾನಗರ ಪಾಲಿಕೆ ಆಯುಕ್ತೆ

Cut-off box - ಮರ ಗಣತಿಗೆ ಸಮಿತಿ ರಚಿಸಿ: ಬಾಲಕೃಷ್ಣ ನಾಯ್ಡು  ‘ಜಿಲ್ಲೆಯಲ್ಲಿರುವ ಮರಗಳ ಮಾಹಿತಿ ಸಂಗ್ರಹಿಸಿ ಅವುಗಳನ್ನು ಗುರುತಿಸುವ ಕೆಲಸ ಆಗಬೇಕು. ಇದರಿಂದ ಅವಶ್ಯಕತೆ ಇದ್ದಾಗ ಅವುಗಳ ಹೆಸರು ವಯಸ್ಸನ್ನು ಸುಲಭವಾಗಿ ತಿಳಿಯಬಹುದು. ಸಮೀಕ್ಷೆ ನಡೆಸಿದಾಗ ಮರ ಇದೆಯೊ ಇಲ್ಲವೊ ಎನ್ನುವುದರ ಬಗ್ಗೆ ವಾಸ್ತವ ಚಿತ್ರಣ ಸಿಗುತ್ತದೆ. ಈ ದೃಷ್ಟಿಯಿಂದ ಮರ ಗಣತಿಗೆ ಸಮಿತಿ ರಚಿಸುವಂತೆ ಅರಣ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಪಾಲಿಕೆಯವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪರಿಸರ ಕಾರ್ಯಕರ್ತ ಬಾಲಕೃಷ್ಣ ನಾಯ್ಡು ಮಾಹಿತಿ ನೀಡಿದರು.

Cut-off box - ಮರಗಳ ಉಳಿವಿಗೆ ಕ್ರಮ ಅಗತ್ಯ ‘ಬೇಸಿಗೆಯಲ್ಲಿ ಮರಗಳಿಗೆ ನೀರಿನ ಅವಶ್ಯಕತೆ ಹೆಚ್ಚಿದೆ. ಆದರೆ ಅಂಗಡಿಗಳ ನಾಮಫಲಕ ಕಾಣುತ್ತಿಲ್ಲ ಎನ್ನುವ ಕಾರಣಕ್ಕೆ ಫಿನಾಯಿಲ್ ಹಾಗೂ ಉಪ್ಪು ನೀರಿನ ಮಿಶ್ರಣವನ್ನು ಮರಗಳ ಬುಡಕ್ಕೆ ಹಾಕಲಾಗುತ್ತಿದೆ. ಕಣ್ಮುಂದೆಯೇ ಈ ರೀತಿಯ ಮೂರ್ನಾಲ್ಕು ಘಟನೆಗಳು ನಡೆದಿವೆ. ಇದರಿಂದ ರಸ್ತೆ ಬದಿಯ ಮರಗಳು ಒಣಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷಿಸಬೇಕು’ ಎಂದು ಸ್ಥಳೀಯರಾದ ಗಜಾನನ ಐತಾಳ್ ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.