ADVERTISEMENT

ಕುವೆಂಪು ವಿವಿ: ಪರೀಕ್ಷಾ ಶುಲ್ಕ ಕಡಿತಕ್ಕೆ ವಿದ್ಯಾರ್ಥಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 11:16 IST
Last Updated 4 ಮಾರ್ಚ್ 2021, 11:16 IST
ಪರೀಕ್ಷಾ ಶುಲ್ಕ ಕಡಿತಗೊಳಿಸುವಂತೆ ಒತ್ತಾಯಿಸಿ ಗುರುವಾರ ವಿದ್ಯಾರ್ಥಿಗಳು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಪರೀಕ್ಷಾ ಶುಲ್ಕ ಕಡಿತಗೊಳಿಸುವಂತೆ ಒತ್ತಾಯಿಸಿ ಗುರುವಾರ ವಿದ್ಯಾರ್ಥಿಗಳು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ಪರೀಕ್ಷಾ ಶುಲ್ಕ ಕಡಿತಗೊಳಿಸಲು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ನಡೆ ಖಂಡಿಸಿ ಗುರುವಾರ ವಿದ್ಯಾರ್ಥಿಗಳು ಆಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.‌‌

ವಿದ್ಯಾರ್ಥಿನಿಲಯಗಳಲ್ಲಿ ದುಬಾರಿ ಪ್ರವೇಶ ಶುಲ್ಕ ವಸೂಲಿ ಮಾಡುವ ಮೂಲಕ ಹಠಮಾರಿ ಧೋರಣೆ ತೋರಿದ ವಿಶ್ವವಿದ್ಯಾಲಯದ ಅಡಳಿತ ಈಗ ಪರೀಕ್ಷಾ ಶುಲ್ಕದ ವಿಚಾರದಲ್ಲೂ ಅಮಾನವೀಯವಾಗಿ ವರ್ತಿಸುತ್ತಿದೆ. ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.

ಹಿಂದಿನ ಸೆಮಿಸ್ಟರ್ ಪರೀಕ್ಷೆಗೆ ₹ 2 ಸಾವಿರ ಪರೀಕ್ಷಾ ಶುಲ್ಕ ಪಡೆಯಲಾಗಿತ್ತು. ಕೊರೊನಾ ಕಾರಣ ಪರೀಕ್ಷೆಗಳು ನಡೆಯಲಿಲ್ಲ. ಈಗ ಮೂರನೇ ಸೆಮಿಸ್ಟರ್‌ಗೆ ಮತ್ತೆ ₹ 2 ಸಾವಿರ ಶುಲ್ಕ ಕಟ್ಟುವಂತೆ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ. ಅದರೆ, ಹಿಂದಿನ ಸೆಮಿಸ್ಟರ್‌ನ ಪರೀಕ್ಷೆಗಳು ನಡೆಯದೆ ಇರುವ ಅದೇ ಪರೀಕ್ಷಾ ಶುಲ್ಕವನ್ನು ಮೂರನೇ ಸೆಮಿಸ್ಟರ್ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಂಡು, ಕೇವಲ ಅಂಕಪಟ್ಟಿ ಶುಲ್ಕ ₹ 200 ಪಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಹೆಚ್ಚಿನ ಅನುದಾನ ನೀಡಿದ್ದಾರೆ. ಆದರೂ ಕುಲಪತಿಗಳು ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.

ಈ ವರ್ಷದ ಹಾಸ್ಟೆಲ್ ಶುಲ್ಕವನ್ನು ₹ 9 ಸಾವಿರಕ್ಕೆ ಹೆಚ್ಚಿಸಲಾಗಿದೆ. ಶುಲ್ಕ ಕಡಿಮೆ ಮಾಡುವಂತೆ ವಿದ್ಯಾರ್ಥಿಗಳ ಮನವಿ ಧಿಕ್ಕರಿಸಿದೆ. ವಿಶ್ವವಿದ್ಯಾಲಯ ಆಡಳಿತ ಸಂಪೂರ್ಣವಾಗಿ ವಿದ್ಯಾರ್ಥಿ ವಿರೋಧಿ ನಿಲುವಿನಿಂದ ಕೂಡಿದೆ. ಸಂಸದರು, ಸಚಿವರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.