
ಶಿವಮೊಗ್ಗ: ಒತ್ತಡ ನಿವಾರಣೆಗೆ ಒಳ್ಳೆಯ ಸ್ನೇಹಿತರೆ ನಿಜವಾದ ಔಷಧ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಇಲ್ಲಿನ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಗುರುವಾರ ಆಯೋಜಿಸಿದ್ದ ಎಂಸಿಸಿ ಕಪ್ ಸೀಸನ್-3 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಹಸಿವಾಗ್ತಿಲ್ಲ, ನಿದ್ದೆ ಬರ್‍ತಿಲ್ಲ, ಜೀರ್ಣ ಆಗ್ತಿಲ್ಲ... ಹೀಗೆ ಪ್ರತಿಯೊಂದಕ್ಕೂ ಮಾತ್ರೆ ಕೊಡಿ ಎಂದು ವೈದ್ಯರನ್ನು ಎಡತಾಕುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯುವುದೇ ಇಂತಹ ಸಮಸ್ಯೆಗಳಿಗೆ ದಿವ್ಯೌಷಧ. ಪ್ರತಿಯೊಂದಕ್ಕೂ ಔಷಧಗಳನ್ನು ಅವಲಂಬಿಸುವುದು ಸೂಕ್ತವಲ್ಲ ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ಹೃದಯಾಘಾತ ಹೆಚ್ಚಾಗುತ್ತಿದೆ. ಚಿಕ್ಕ ವಯಸ್ಸಿನವರು ಉಸಿರು ಚೆಲ್ಲುತ್ತಿದ್ದಾರೆ. ಆದ ಕಾರಣ ವಾಕಿಂಗ್, ಧ್ಯಾನದತ್ತ ಗಮನ ಹರಿಸಬೇಕು. ನಿತ್ಯ ವಾಕಿಂಗ್ ಮಾಡಬೇಕು. ಬೆಳಿಗ್ಗೆ ಎದ್ದ ಬಳಿಕ ಒಂದು ತಾಸು ಆಗುವವರೆಗೂ, ಮಲಗುವ ಒಂದು ತಾಸು ಮೊದಲು, ಊಟ ಮಾಡುವಾಗ ಮೊಬೈಲ್ ಫೋನ್ ನೋಡಬಾರದು ಎಂದರು.
‘ನಮ್ಮ ಆಲೋಚನೆಗಳು ಸದಾ ಉತ್ತುಂಗದಲ್ಲಿರಬೇಕು. ಒಳ್ಳೆಯ ಆಲೋಚನೆಗಳು ದೇಶ ಕಟ್ಟಲು ಪೂರಕ. ನಮ್ಮ ಹೆಜ್ಜೆಗಳು ಸದಾ ಗೆಲುವಿನೆಡೆಗೆ ಇರಬೇಕು’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
‘ಕ್ರೀಡೆಗಳು ಜೀವನದ ಪಾಠ ಕಲಿಸುತ್ತವೆ. ಇಂದಿನ ದಿನಗಳಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ. ಈ ನಿಟ್ಟಿನಲ್ಲಿ ಗಮನ ಹರಿಸಬೇಕು’ ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್ ತಿಳಿಸಿದರು.
ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಡಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಸಂಯೋಜಕ ಜಿ.ಡಿ.ಮಂಜುನಾಥ್, ಉದ್ಯಮಿ ಟಿ.ಎಸ್.ಸಿದ್ದೇಶ್, ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಎಸ್.ಕುಮಾರ್, ಸಂಘದ ಹಿರಿಯ ಸದಸ್ಯರಾದ ಮೋಹನ್ ಶೆಟ್ಟಿ, ಚಂದ್ರಣ್ಣ, ಎಂ.ಗೋವಿಂದರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.