ADVERTISEMENT

ರಾಜ್ಯಪಾಲರ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಿವೈಆರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 3:08 IST
Last Updated 24 ಜನವರಿ 2026, 3:08 IST
ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ   

ಶಿವಮೊಗ್ಗ: ‘ವಿಧಾನಸಭೆಯ ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಅತ್ಯಂತ ಖಂಡನೀಯ. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.

‘ರಾಜ್ಯಪಾಲರಿಗೆ ಸಮರ್ಪಕ ಭದ್ರತೆ ಇಲ್ಲದಿದ್ದರೆ ಊಹಿಸಲಾರದಂತಹ ದುರ್ಘಟನೆ ಸಂಭವಿಸಬಹುದಾಗಿತ್ತು. ಮುಖ್ಯಮಂತ್ರಿ ಕಣ್ಣೆದುರಿನಲ್ಲೇ ಇಂತಹ ಅಹಿತಕರ ಘಟನೆ ನಡೆದರೂ ಸರ್ಕಾರ ಮೌನ ವಹಿಸಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಚಾರವಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ವಿಧಾನಸಭೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಂವಿಧಾನದ ಸಂಪ್ರದಾಯಕ್ಕೆ ಅನುಗುಣವಾಗಿ ಭಾಷಣ ಮಾಡುತ್ತಿದ್ದಾಗ ಕಾಂಗ್ರೆಸ್ ಸದಸ್ಯರು ರೌಡಿಗಳಂತೆ ವರ್ತಿಸಿದ್ದಾರೆ. ಸಂಸತ್ತನ್ನು ಪ್ರತಿನಿಧಿಸಿ ಬಂದಿರುವ ಬಿ.ಕೆ. ಹರಿಪ್ರಸಾದ್ ಅವರ ನಡೆ ಅನುಚಿತವಾಗಿದ್ದು, ಹೈಕಮಾಂಡ್ ಓಲೈಸುವ ಉದ್ದೇಶದಿಂದ ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯ ಸರ್ಕಾರ ಪುಸ್ತಕ ರೂಪದಲ್ಲಿ ತಯಾರಿಸಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳನ್ನು ಸೇರಿಸಿ, ಅದನ್ನು ರಾಜ್ಯಪಾಲರ ಬಾಯಿಂದ ಹೇಳಿಸಲು ಯತ್ನಿಸಲಾಗಿದೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆದಿದ್ದು, ಇದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ’ ಎಂದು ತಿಳಿಸಿದರು.

‘ಹಿಂದೆ ಹಂಸರಾಜ್ ಭಾರಧ್ವಾಜ್ ರಾಜ್ಯಪಾಲರಾಗಿದ್ದಾಗ ಯಡಿಯೂರಪ್ಪ ಸರ್ಕಾರವನ್ನು ಕೆಡುವುದಾಗಿ ಶಪಥ ಮಾಡಿದ್ದನ್ನು ನೆನಪಿಸಿದ ಅವರು, ಕಾಂಗ್ರೆಸ್ ಮಾಡಿದ್ದನ್ನೆಲ್ಲ ಜನಪರವಾಗಿ ಮತ್ತು ಇತರರು ಮಾಡಿದ ಕಾರ್ಯಗಳನ್ನು ಜನವಿರೋಧಿಯಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.

‘ನರೇಗಾ ಯೋಜನೆಯ ಹೆಸರನ್ನೇ ಕಾಲಾನುಸಾರ ಬದಲಿಸಲಾಗಿದ್ದು, ಕಾಂಗ್ರೆಸ್ ಆರಂಭದಲ್ಲಿ ಗಾಂಧೀಜಿ ಹೆಸರನ್ನೂ ಸೇರಿಸಿರಲಿಲ್ಲ. ಗ್ಯಾರಂಟಿ ಯೋಜನೆಗಳ ಕಾರಣದಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದನ್ನು ಮುಚ್ಚಿಹಾಕಲು ವಿಬಿ ಜಿ ರಾಮ್‌ ಜಿ ಯೋಜನೆ ಕುರಿತು ವಿವಾದ ಸೃಷ್ಟಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಹಾಗೂ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಗಳ ಹಣವನ್ನು ರಾಜ್ಯ ಸರ್ಕಾರ ನಿಲ್ಲಿಸಿರುವುದು ಸರಿಯೇ’ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಮಾಲತೇಶ್, ಶಿವರಾಜ್, ರಾಮು ಕೋಹಳ್ಳಿ, ವೀರಭದ್ರಪ್ಪ ಪೂಜಾರಿ, ಹರೀಶ್ ನಾಯಕ್, ಮೋಹನ್, ಪ್ರಶಾಂತ್ ಕುಕ್ಕೆ, ಚಂದ್ರಶೇಖರ್, ರಾಜೇಶ್ ಕಾಮತ್, ಸಂತೋಷ್ ಬಳ್ಳೆಕೆರೆ, ದಿವಾಕರ್ ಶೆಟ್ಟಿ, ಸುಮಾ ಭೂಪಾಳಂ ಸೇರಿದಂತೆ ಹಲವರು ಇದ್ದರು.

ವಿಬಿ ಜಿ ರಾಮ್–ಜಿ ಯೋಜನೆ ವಿರೋಧಿಸಲು ನರೇಗಾ ಯೋಜನೆಯನ್ನು ಮುಂದಿಟ್ಟು ಕೊಳ್ಳಲಾಗುತ್ತಿದ್ದು, ರಾಮನ ಹೆಸರೇ ಕಾಂಗ್ರೆಸ್ ನಾಯಕರಿಗೆ ಅಲರ್ಜಿ ಎಂಬಂತೆ ವರ್ತಿಸುತ್ತಿದ್ದಾರೆ
ಬಿ.ವೈ. ರಾಘವೇಂದ್ರ, ಸಂಸದ
ಕೇಂದ್ರ ವಿರುದ್ಧ  ವೃಥಾ ಆರೋಪ
‘ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಇತರೆ ಅಭಿವೃದ್ಧಿಗಳನ್ನು ನಿಲ್ಲಿಸಿ, ಅದರ ಹೊಣೆಯನ್ನು ಕೇಂದ್ರದ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿ ಮಾಡಿಲ್ಲ. ಭತ್ತ ಖರೀದಿ ಕೇಂದ್ರಗಳನ್ನು ತಡವಾಗಿ ಆರಂಭಿಸಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಆದರೂ ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನರೇಗಾ ಯೋಜನೆಯಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೇ ಹೇಳಿದ್ದನ್ನು ಈಗ ಮರೆತಿದ್ದಾರೆ’ ಎಂದು ಸಂಸದ ರಾಘವೇಂದ್ರ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.