
ಶಿವಮೊಗ್ಗ: ‘ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಸಾರ್ವಜನಿಕರ ಪಾಲಿಗೆ ನರಕವಾಗಿದೆ’ ಎಂದು ರಾಷ್ಟ್ರಭಕ್ತ ಬಳಗದ ಮುಖಂಡ ಕೆ.ಈ. ಕಾಂತೇಶ್ ಆರೋಪಿಸಿದರು.
‘ಪಾಲಿಕೆ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಅವರ ನಿರ್ಲಕ್ಷ್ಯದ ಪರಿಣಾಮ ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಗಳನ್ನು ಫಲಾನುಭವಿಗಳಿಗೆ ವಿತರಿಸದೇ ಬಾಡಿಗೆ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಸಂಕೀರ್ಣದಲ್ಲಿನ 118 ಮಳಿಗೆಗಳು ಮಹಾನಗರ ಪಾಲಿಕೆಗೆ ಹಸ್ತಾಂತರಗೊಂಡು ಎರಡು ವರ್ಷಗಳಾಗಿವೆ. ಒಂದು ಮಳಿಗೆಗೆ ₹ 5,000 ಅಂದುಕೊಂಡರೂ ಎರಡು ವರ್ಷಗಳಲ್ಲಿ ₹ 1.41 ಕೋಟಿ ನಷ್ಟವಾಗಿದೆ. ಜೊತೆಗೆ 23 ತಿಂಗಳ ಬಾಡಿಗೆ ಮುಂಗಡ ₹1.34 ಕೋಟಿ ಕೂಡ ಇಲ್ಲವಾಗಿದೆ’ ಎಂದು ಹೇಳಿದರು.
‘ಗಾರ್ಡನ್ ಏರಿಯಾದ ವಾಣಿಜ್ಯ ಸಂಕೀರ್ಣದಲ್ಲಿ 98 ಮಳಿಗೆಗಳಿದ್ದು, ಹಸ್ತಾಂತರಗೊಂಡು ಐದು ವರ್ಷಗಳಾಗಿವೆ. ಇಲ್ಲಿಯೂ ಕೂಡ ಸುಮಾರು ₹5.8 ಕೋಟಿ ಬಾಡಿಗೆ ನಷ್ಟವಾಗಿದೆ. ₹2.25 ಕೋಟಿಯಷ್ಟು ಮುಂಗಡ ಹಣ ಇಲ್ಲವಾಗಿದೆ. ಹಾಗೆಯೇ ಗಾಂಧಿನಗರದ ವಾಣಿಜ್ಯ ಸಂಕೀರ್ಣದಲ್ಲಿ 13 ಮಳಿಗೆಗಳ ನಿರ್ಮಿಸಿದ್ದು, ಹಸ್ತಾಂತರಗೊಂಡು ಎರಡು ವರ್ಷ ಕಳೆದಿದೆ. ಅಲ್ಲಿಯೂ ಕೂಡ ಸುಮಾರು ₹31 ಲಕ್ಷದಷ್ಟು ಬಾಡಿಗೆ ಇಲ್ಲವಾಗಿದೆ. ಒಟ್ಟಾರೆ 229 ಮಳಿಗೆಗಳಿಂದ ₹11.51 ಕೋಟಿಯಷ್ಟು ಮಹಾನಗರ ಪಾಲಿಕೆಗೆ ಬಾಡಿಗೆ ನಷ್ಟವಾಗಿದೆ’ ಎಂದರು.
‘ಜೊತೆಗೆ ಇ–ಸ್ವತ್ತು ವಿತರಣೆಯಲ್ಲೂ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಏಜೆಂಟರ ಮುಖಾಂತರ ಹೋದವರಿಗೆ ಮಾತ್ರ ಇ–ಸ್ವತ್ತು ಸಿಗುತ್ತದೆ. ಇದು ಕೂಡ ತನಿಖೆಯಾಗಬೇಕಾಗಿದೆ. ಆಶ್ರಯ ಯೋಜನೆಯ ಮನೆಗಳಿಗಾಗಿ ಬಡವರು ಸಾಲಮಾಡಿ ಸರ್ಕಾರಕ್ಕೆ ಹಣ ಕಟ್ಟಿದ್ದಾರೆ. ಆದರೂ ಸಹ ಇಲ್ಲಿಯವರೆಗೆ ಮನೆಗಳ ಹಂಚಿಕೆ ಸರಿಯಾಗಿ ಆಗಿಲ್ಲ. ಜೊತೆಗೆ ರಸ್ತೆಗಳೆಲ್ಲಾ ಗುಂಡಿಬಿದ್ದಿವೆ. ಕುಡಿಯುವ ನೀರಿನ ಸಮಸ್ಯೆಯಂತೂ ಎಲ್ಲಾ ವಾರ್ಡಿನಲ್ಲೂ ಕಂಡು ಬರುತ್ತಿದೆ. 24x7 ನೀರು ಪೂರೈಕೆ ಆರಂಭವಾದ ನಂತರ ಜನರು ತೊಂದರೆಗೆ ಒಳಗಾಗಿದ್ದಾರೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮೋಹನ್ ಜಾಧವ್, ಸುವರ್ಣಾ ಶಂಕರ್, ರಾಜಣ್ಣ, ಆ.ಮ. ಪ್ರಕಾಶ್, ಶಂಕ್ರಾನಾಯ್ಕ, ಕುಬೇರಪ್ಪ, ನಾಗರಾಜ್, ಗೋವಿಂದ್, ರಾಜು ಇದ್ದರು.
ಪಾಲಿಕೆಗೆ ಮುತ್ತಿಗೆ ಜ. 2ಕ್ಕೆ
‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳನ್ನು ನಿಯಮಗಳ ಆಧಾರದಲ್ಲಿ ಬಾಡಿಗೆ ನೀಡಬೇಕು. ಇಲ್ಲದಿದ್ದರೆ ಜನವರಿ 2ರಂದು ರಾಷ್ಟ್ರಭಕ್ತರ ಬಳಗದಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು. ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಕಾಂತೇಶ್ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.