
ಶಿವಮೊಗ್ಗ: ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ 32 ವರ್ಷಗಳ ನಂತರ ನಗರದಲ್ಲಿ ಪಂಚಪೀಠ ಉತ್ಸವ ಹಾಗೂ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಯಡೆಯೂರು ಹಾಗೂ ಬಿಳಕಿ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ವೀರಶೈವ-ಲಿಂಗಾಯತ ಸಮಾಜದ ಪ್ರಮುಖರ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಪಕ್ಷಾತೀತವಾಗಿ ಸಮಾಜದ ಎಲ್ಲ ವರ್ಗದವರು ಒಂದಾಗಿ ಉತ್ಸವವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಸಂಸದ ಬಿ.ವೈ. ರಾಘವೇಂದ್ರ ಅವರ ಗೌರವಾಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ, ಮಾತನಾಡಿ, ‘ಈ ಉತ್ಸವ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ನಡೆಯಬೇಕು’ ಎಂದು ಹೇಳಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ‘32 ವರ್ಷಗಳ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಪಂಚಪೀಠ ಶ್ರೀಗಳ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಇಂದಿನ ಪೀಳಿಗೆಗೆ ಈ ಉತ್ಸವದ ಮಹತ್ವ ಪರಿಚಯಿಸುವ ನಿಟ್ಟಿನಲ್ಲಿ ಇನ್ನಷ್ಟು ಸಂಭ್ರಮದಿಂದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಅಂಗವಾಗಿ ಮೇ 16ರಂದು ಪಂಚಪೀಠ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮೇ 17ರಂದು ಸಮಾಜದ ವತಿಯಿಂದ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆ ನಡೆಸಲು ಚರ್ಚಿಸಲಾಯಿತು.
ಅಡ್ಡಪಲ್ಲಕ್ಕಿ ಉತ್ಸವದ ಧಾರ್ಮಿಕ ಸಭೆಯನ್ನು ಎನ್‌ಇಎಸ್ ಮೈದಾನ ಅಥವಾ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಿ, 15ರಿಂದ 20 ಸಾವಿರ ಜನರು ಭಾಗವಹಿಸುವಂತೆ ವ್ಯವಸ್ಥಿತವಾಗಿ ನಡೆಸಲು ನಿರ್ಧರಿಸಲಾಯಿತು. ಅಡ್ಡಪಲ್ಲಕ್ಕಿ ಉತ್ಸವವನ್ನು ಗಾಂಧಿ ಬಜಾರ್‌ನಿಂದ ಆರಂಭಿಸಿ ಧಾರ್ಮಿಕ ಸಭೆಯ ವೇದಿಕೆಯವರೆಗೆ ಪೂರ್ಣಕುಂಭದೊಂದಿಗೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು.
ಉತ್ಸವದ ಯಶಸ್ಸಿಗಾಗಿ ಸಮಾಜದ ಹಿರಿಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಕೆಆರ್‌ಡಿಎಲ್ ಅಧ್ಯಕ್ಷ ಸಂಗಮೇಶ್ ಸೇರಿದಂತೆ ಪಕ್ಷಾತೀತವಾಗಿ ಸಮಾಜದ ಪ್ರಮುಖರ ಮಾರ್ಗದರ್ಶನ ಮತ್ತು ಸಹಕಾರ ಪಡೆಯಲು ಸಭೆಯಲ್ಲಿ ಚರ್ಚಿಸಲಾಯಿತು. ಜೊತೆಗೆ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಹಣಕಾಸು ಸಮಿತಿ, ಮೆರವಣಿಗೆ ಸಮಿತಿ, ಪ್ರಚಾರ ಸಮಿತಿ, ದಾಸೋಹ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು.
ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಹಾಗೂ ಕಾರ್ಯದರ್ಶಿ ಎಸ್.ಪಿ. ದಿನೇಶ್ ಮಾತನಾಡಿ, ‘ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ಜವಾಬ್ದಾರಿಯನ್ನು ಎಲ್ಲರ ಸಹಕಾರದೊಂದಿಗೆ ನಿರ್ವಹಿಸುವುದಾಗಿ’ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೀಶ್, ಸೊಸೈಟಿ ಅಧ್ಯಕ್ಷ ಬಳ್ಳಕೆರೆ ಸಂತೋಷ್, ಸಮಾಜದ ಪ್ರಮುಖರಾದ ರುದ್ರಮುನಿ ಸಜ್ಜನ್, ಎಚ್.ವಿ. ಮಹೇಶ್ವರಪ್ಪ, ವಿರುಪಾಕ್ಷಪ್ಪ, ಚಂದ್ರಯ್ಯ, ಬೆನಕಪ್ಪ, ಎಂ.ಆರ್. ಪ್ರಕಾಶ್ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
ಫೆ. 19ಕ್ಕೆ 2ನೇ ಪೂರ್ವಭಾವಿ ಸಭೆ ನಡೆಸಲು ತೀರ್ಮಾನ 15ರಿಂದ 20 ಸಾವಿರ ಜನರಿಗೆ ವ್ಯವಸ್ಥೆಗೆ ನಿರ್ಧಾರ ಕಾರ್ಯಕ್ರಮ ಯಶಸ್ಸಿಗೆ ವಿವಿಧ ಸಮಿತಿ ರಚಿಸಲು ಒಪ್ಪಿಗೆ
ಮೂರು ದಶಕದ ಬಳಿಕ ಹಮ್ಮಿಕೊಳ್ಳುತ್ತಿರುವ ಈ ಅಡ್ಡಪಲ್ಲಕ್ಕಿ ಉತ್ಸವ ಇಡೀ ನಗರವನ್ನು ಶೃಂಗರಿಸಿ ಅದ್ದೂರಿಯಾಗಿ ನಡೆಸೋಣ
-ಎಸ್.ಎನ್. ಚನ್ನಬಸಪ್ಪ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.