ADVERTISEMENT

ಶಿವಮೊಗ್ಗ : ಕಲ್ಲು ಎಸೆದವರು, ಪಾಕಿಸ್ತಾನ ಪರ ಘೋಷಣೆ ಕೂಗಿದವರ ಬಂಧಿಸಿ

-

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:24 IST
Last Updated 13 ಸೆಪ್ಟೆಂಬರ್ 2025, 5:24 IST
ಶಿವಮೊಗ್ಗದ ರಾಷ್ಟ್ರಭಕ್ತರ ಬಳಗದಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗದ ರಾಷ್ಟ್ರಭಕ್ತರ ಬಳಗದಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.   

ಶಿವಮೊಗ್ಗ : ಹಿಂದೂಗಳ ಧಾರ್ಮಿಕ ಆಚರಣೆಗಳ ಮೇಲೆ ದಾಳಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಹಿಂದೂಗಳು ಬದುಕುವುದೇ ದುಸ್ತರವಾಗಿದೆ. ಹಬ್ಬ, ಹರಿದಿನ, ಮೆರವಣಿಗೆಗಳ ಮಾಡುವುದೇ ತಪ್ಪು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಂತಿದೆ. ಮದ್ದೂರಿನಲ್ಲಿ ಶಾಂತಿಯುತವಾಗಿ ಗಣೇಶ ಮೆರವಣಿಗೆ ನಡೆಯುತ್ತಿದ್ದ ವೇಳೆ ಮುಸ್ಲಿಮರು ಕಲ್ಲು ಎಸೆದರು. ಭದ್ರಾವತಿಯ ಈದ್ ಮೆರವಣಿಗೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿದೆ. ರಾಷ್ಟ್ರಭಕ್ತರ ಬಳಗ ಇದನ್ನು ಖಂಡಿಸುತ್ತದೆ ಎಂದರು.

‘ಗಣೇಶ ಉತ್ಸವ, ಹನುಮ ಜಯಂತಿ ಆಚರಣೆಗಳ ಮಾಡುವುದು ಅಪರಾಧವೇ? ಹಿಂದೂಗಳ ಧಾರ್ಮಿಕ ಆಚರಣೆಯ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರದು ಎಂದು ಕಾನೂನು ಇದೆಯಾ’ ಎಂಬುದಾಗಿ ಪ್ರಶ್ನಿಸಿದರು.

ADVERTISEMENT

‘ಯಾವುದೇ ಘಟನೆ ನಡೆದರೂ ಸಿಎಂ ಮತ್ತು ಡಿಸಿಎಂ ಅದನ್ನು ಸಣ್ಣ ಘಟನೆ ಎಂದು ಬಿಂಬಿಸುತ್ತಾರೆ. ಪ್ರತಿಭಟಿಸಿದ ಹಿಂದೂಗಳ ಮೇಲೆಯೇ ಪೊಲೀಸರು ಲಾಠಿಪ್ರಹಾರ ಮಾಡುತ್ತಾರೆ. ಕೆಲವು ಮುಸ್ಲಿಮರು ಮತ್ತೆ ಮತ್ತೆ ರಾಜ್ಯದಲ್ಲಿ ಗಲಭೆ, ದೊಂಬಿ, ಶತ್ರು ದೇಶದ ಪರ ಘೋಷಣೆಗಳನ್ನು ಕೂಗುತ್ತಾರೆ. ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲವೇ?’ ಎಂದರು.

‘ಕೂಡಲೇ ರಾಜ್ಯ ಸರ್ಕಾರ ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಹಿಂದೂ ಹಬ್ಬಗಳ ಮೆರವಣಿಗೆಗಳಲ್ಲಿ  ಯಾವುದೇ ತೊಂದರೆಯಾಗದಂತೆ ಕಠಿಣಕ್ರಮ ಕೈಗೊಳ್ಳಬೇಕು, ರಾಜ್ಯ ಸರ್ಕಾರ ಇದೇ ರೀತಿ ಮುಂದುವರೆದರೆ ಹಿಂದೂಗಳು ತಿರುಗಿ ಬೀಳುತ್ತಾರೆ. ಸರ್ಕಾರಕ್ಕೆ ತಕ್ಕಪಾಠ ಕಲಿಸುತ್ತಾರೆ’ ಎಂದು ಎಚ್ಚರಿಸಿದರು.

ಮನವಿ ನೀಡುವ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ, ಕೆ.ಈ. ಕಾಂತೇಶ್, ಈ. ವಿಶ್ವಾಸ್, ರಮೇಶ್‌ ಕುಮಾರ್ ಜಾಧವ್, ಮಹೇಶ್‌ಕುಮಾರ್, ಶ್ರೀಕಾಂತ್, ಕುಬೇರಪ್ಪ, ಮೋಹನ್, ಅನಿತಾ, ವೆಂಕಟೇಶ್, ಮೂರ್ತಿ, ಮಂಜುನಾಥ್, ಸೀತಾಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.